ಯುದ್ಧದಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಅಂತ ಯಾವುದು ಬರಲ್ಲ……….
ವಿಜಯಸಾಕ್ಷಿ ಸುದ್ದಿ, ಗದಗ
ಯುದ್ಧದಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಅಂತ ಯಾವುದು ಬರಲ್ಲ. ಮೊದಲು ಯುದ್ಧ ಮಾಡಿ ಗೆದ್ದು ಬಾ ಎಂದು ಕೃಷ್ಣ ಪರಮಾತ್ಮ ಹೇಳಿದ್ದಾನೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಧರ್ಮಯುದ್ಧ ಮಾಡುತ್ತಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಗದಗನಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಪರವಾಗಿ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದರು.
ಮಹಾಭಾರತದಲ್ಲಿ ಭಗವಾನ್ ಕೃಷ್ಣ ಹೇಳಿದ್ದಾರೆ. ಯುದ್ಧದಲ್ಲಿ ನೀ ಹೋಗಿದ್ರೆ ನಿನ್ನ ಕುಟುಂಬದವರು ಅದಾರ್, ಗೆಳೆಯರು ಅದಾರ ಏನೂ ನೋಡಬ್ಯಾಡ ಎಂದಿದ್ದಾರೆ ಎಂದರು. ಹೀಗಾಗಿ ಶೆಟ್ಟರ್ ವಿರುದ್ಧ ಧರ್ಮ ಯುದ್ಧ ಮಾಡುತ್ತಿದ್ದೇವೆ ಎಂದರು.
ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ವಿರುದ್ಧ ಈ ಧರ್ಮಯುದ್ಧ ಅಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಅಷ್ಟೇ ಎಂದರು.
ಸಿಎಂ ಆಗುವ ಆಶೆ ಇದೆ ಎಂದು ಇಂಗಿತ ವ್ಯಕ್ತಪಡಿಸಿದ ಯತ್ನಾಳ, ನಾನೇನೂ ಆಯೋಗ್ಯನಾ..? ನನಗೆ ಶಕ್ತಿ ಇಲ್ವಾ ಎಂದು ಪ್ರಶ್ನಿಸಿದರು. ನನ್ನ ಆಡಳಿತ ಬಂದರೆ ಉತ್ತರ ಪ್ರದೇಶ ಯೋಗಿ ರೀತಿಯಲ್ಲಿ ಆಡಳಿತ ಬರುತ್ತೆ. ಅವಕಾಶ ಕೊಟ್ರೆ ಸಿಎಂ ಆಗ್ತೀನಿ ಎಂದರು.
ಕೆಲವರು ನನ್ನನ್ನು ಪಂಜರದೊಳಗೆ ಇಟ್ಟಿದ್ರು. ಅವರೆಲ್ಲಾ ತಮ್ಮ ಕುಟುಂಬ ಬೆಳೆಬೇಕು, ನಾ ಆದ ನಂತರ ನನ್ನ ಮಗ ಸಿಎಂ ಆಗಬೇಕು ಅಂತ ಅನಕೊಂಡಿದ್ದರು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಮುಖಂಡರಾದ ರಾಜು ಕುರಡಗಿ, ಅಮರನಾಥ ಬೆಟಗೇರಿ, ಪರಮೇಶ್ ನಾಯಕ ಸೇರಿದಂತೆ ಅನೇಕ ಮುಖಂಡರು ಇದ್ದರು.