ಶಾಸಕ ಬಂಡಿ ವಿರುದ್ಧ ಲಕ್ಷ್ಮಣ ಸವದಿ ವಾಗ್ದಾಳಿ……
ವಿಜಯಸಾಕ್ಷಿ ಸುದ್ದಿ, ರೋಣ
ತನ್ನ ಕುಟುಂಬವನ್ನೇ ರಕ್ಷಿಸಿಕೊಳ್ಳದವರು ಇನ್ನು ಇಡೀ ಕ್ಷೇತ್ರವನ್ನು ಹೇಗೆ ರಕ್ಷಿಸುತ್ತಾರೆ ಎಂಬುದನ್ನು ಮತಕ್ಷೇತ್ರದ ಮತದಾರರು ಅರಿಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಅವರು ಸೋಮವಾರ ರೋಣ ಪಟ್ಟಣದ ವಿ.ಎಫ್.ಪಾಟೀಲ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲರವರ ಪರವಾಗಿ ಮತಯಾಚನೆ ಮಾಡುವ ಮೂಲಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕ ಕಳಕಪ್ಪ ಬಂಡಿಯವರ ವರ್ತನೆಯಿಂದ ಬೇಸತ್ತು ಕುಟುಂಬದ ಸದಸ್ಯರೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಅಂದರೆ ಕಳಕಪ್ಪ ಬಂಡಿ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವೇ ಎಂದು ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ 65 ಸ್ಥಾನಗಳನ್ನು ಮೀರುವುದಿಲ್ಲ. ಈಗಾಗಲೇ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 127 ರಿಂದ 137 ಸ್ಥಾನಗಳನ್ನು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಜಗದೀಶ ಶೆಟ್ಟರ ಹಾಗೂ ನಾನು ಬಿಜೆಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ಪಕ್ಷದ ಬೆಳವಣಿಗೆಯಲ್ಲಿ ಮುಖ್ಯಪಾತ್ರವನ್ನು ವಹಿಸಿದ್ದೇವೆ. ಆದರೆ ಬಿಜೆಪಿಯಲ್ಲಿ ಕೆಲವರಿಂದ ಹಿಡನ್ ಅಜೆಂಡಾ ರೂಪಿತವಾಗಿದ್ದು, ಈ ಹಿಡನ್ ಅಜೆಂಡಾವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಬಿಜೆಪಿ ನಮಗೆ ಅನ್ಯಾಯ ಮಾಡಿದೆ.
ಯಡಿಯೂರಪ್ಪನವರು ನಮ್ಮ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರಿಗೂ ಬಿಜೆಪಿ ಎಲ್ಲವನ್ನೂ ನೀಡಿತ್ತು. ಹಾಗಾದರೆ ಕೆಜಿಪಿ ಪಕ್ಷವನ್ನು ಯಾಕೆ ಕಟ್ಟಿದರು ಎಂದು ಪ್ರಶ್ನಿಸಿದರು.
ಮಾಜಿ ಸಂಸದ ಆರ್.ಎಸ್.ಪಾಟೀಲ, ವಿಧಾನ ಪರಿಷತ್ತ ಸದಸ್ಯ ಶರಣಗೌಡ ಪಾಟೀಲ, ಐ.ಎಸ್.ಪಾಟೀಲ, ವಿ.ಆರ್.ಗುಡಿಸಾಗರ, ಹುಚ್ಚಪ್ಪ ನವಲಗುಂದ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ಪ್ರಭು ಮೇಟಿ, ಅಂದಪ್ಪ ಬಿಚ್ಚೂರ, ರೂಪಾ ಅಂಗಡಿ, ಮಂಜುಳಾ ಹುಲ್ಲಣ್ಣವರ, ನಾಜಬೇಗಂ ಯಲಿಗಾರ, ಮಂಜುಳಾ ರೇವಡಿ, ವಿ.ಬಿ.ಸೋಮನಕಟ್ಟಿಮಠ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಬಿಜೆಪಿ ಪಕ್ಷದಲ್ಲಿದ್ದಾಗ ಉಸ್ತುವಾರಿಯಾಗಿ ಗದಗಿಗೆ ಬಂದಿದ್ದೆ. ಸಿದ್ದಣ್ಣ ಬಂಡಿ ಪರವಾಗಿ ಹೆಚ್ಚಿನ ಒತ್ತಡ ಇತ್ತು. ವಿಪರ್ಯಾಸ ಅಂದರೆ ಶಾಸಕರ ಪತ್ನಿ ಸ್ವತಃ ನನ್ನ ಗಂಡನಿಗೆ ಟಿಕೆಟ್ ಬೇಡ ನನಗೆ ಕೊಡಿ ಎಂದು ಕೇಳಿದ್ದರು. ಜಿಲ್ಲೆಗೆ ಆಗಮಿಸುವ ಮೊದಲೇ ಕ್ಷೇತ್ರಗಳ ಬಗ್ಗೆ ತಿಳಿದುಕೊಂಡಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್.ಪಾಟೀಲರ ಗೆಲುವು ಖಚಿತವಾಗಿತ್ತು.
ಲಕ್ಷ್ಮಣ ಸವದಿ, ಮಾಜಿ ಉಪ ಮುಖ್ಯಮಂತ್ರಿಗಳು