ಪ್ಲಾಟ್ ಕೊಡ್ತೀವಿ ಅಂತ ಹಣ ಪಡೆದು ಹಲವರಿಗೆ ಮೋಸ; ಹಣ ವಾಪಾಸು ಕೇಳಿದರೆ ಜೀವ ಬೆದರಿಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಪ್ಲಾಟ್ ಕೊಡುತ್ತೇನೆಂದು ಹೇಳಿ ಹಣವನ್ನು ಪಡೆದು, ಸಂಚಗಾರಿಕೆ ಪತ್ರವನ್ನು ಬರೆಯಿಸಿಕೊಂಡು ಆಸ್ತಿಯನ್ನೂ ಹೆಸರಿಗೆ ಮಾಡಿಕೊಡದೇ, ದುಡ್ಡನ್ನೂ ಹಿಂದಿರುಗಿಸದೇ ಮೋಸವೆಸಗಿದ್ದಲ್ಲದೇ, ಹಣವನ್ನು ವಾಪಸ್ ಕೇಳಿದ್ದಕ್ಕೆ ಕೀಳು ಶಬ್ಧಗಳಿಂದ ಬೈದು ಜೀವಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಿರ್ಯಾದಿ ನೀಲವ್ವ ಅಮರಪ್ಪ ರಾಂಪೂರ ಅವಳ ಪತಿ ದಿ. ಅಮರಪ್ಪ ದುರಗಪ್ಪ ರಾಂಪೂರ ಹಾಗೂ ಯಲ್ಲಪ್ಪ ದುರಗಪ್ಪ ಮಾದರ, ನಾಗೇಶ ಈರಪ್ಪ ಮಾಳೋತ್ತರ, ಕೃಷ್ಣಾ ರಾಮಪ್ಪ ಹುಳ್ಳಿಕೇರಿ, ಶಾರದಾ ಕೋ ಸುರೇಶ ರಾಠೋಡ, ಶಿವಕುಮಾರ ಸಂಗಪ್ಪ ಪೂಜಾರ ಇವರೆಲ್ಲರೂ ಕೂಡಿಕೊಂಡು 4-5 ವರ್ಷಗಳ ಹಿಂದೆ ಆರೋಪಿತರಾದ ಪ್ರಭು ಲೋಕನಾಥಸಾ ಬಾಂಡಗೆ, ಲೋನಾಥಸಾ ವೆಂಕೂಸಾ ಬಾಂಡಗೆ ಇವರಿಗೆ ಸಂಬಂಧಿಸಿದ ಉಣಚಗೇರಿ ಗ್ರಾಮದ ಹದ್ದಿಯಲ್ಲಿ ಸ.ನಂ 25/1ರಲ್ಲಿ 3.2 ಎಕರೆ ಹಾಗೂ ಸ.ನಂ.271/1ರಲ್ಲಿ 6.33 ಎಕರೆ ಜಮೀನುಗಳಲ್ಲಿ ಪ್ಲಾಟ್ ಗಳನ್ನು ಮಾಡಿದ್ದು, ಸದರಿ ಪ್ಲಾಟ್ ಗಳಲ್ಲಿ ಫಿರ್ಯಾದಿಯ ಗಂಡನ ಹೆಸರಿನಲ್ಲಿ ಒಂದು ಪ್ಲಾಟನ್ನು 2.25ಲಕ್ಷ.ರೂ ಆರೋಪಿತರಿಗೆ ನೀಡಿ ಸಂಚಗಾರ ಪತ್ರವನ್ನು ಬರೆಸಿಕೊಂಡು ಪೂರ್ತಿ ದುಡ್ಡನ್ನು ಕೊಟ್ಟಿದ್ದಾರೆ.

ನಂತರ ಫಿರ್ಯಾದಿ ನೀಲವ್ವ ಹಾಗೂ ಉಳಿದವರೂ ಕೂಡಿ ಆರೋಪಿತರಿಗೆ ನಮಗೆ ಪ್ಲಾಟ್ ಕೊಡಿ ಎಂದು ಕೇಳಿದಾಗ, ಇಂದು ಕೊಡ್ತೇವೆ, ನಾಳೆ ಕೊಡ್ತೇವೆ ಎಂದು ದಿನ ಕಳೆಯತೊಡಗಿದ್ದರು.

ಕೊಟ್ಟ ಹಣವನ್ನೂ ವಾಪಸ್ ನೀಡದಿದ್ದಾಗ, ಜು.23ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಗಜೇಂದ್ರಗಡ ಪಟ್ಟಣದ ದುರ್ಗಾ ಸರ್ಕಲ್ ಬಳಿಯಿರುವ ಆರೋಪಿತರ ಜೈಮಾತಾ ಅಂಗಡಿಗೆ ಹೋಗಿ, ನಮಗೆ ಪ್ಲಾಟನ್ನು ಕೊಡಿ. ಇಲ್ಲವಾದರೆ ನಾವು ಕೊಟ್ಟ ದುಡ್ಡನ್ನಾದರೂ ವಾಪಸ್ ಕೊಡಿ ಎಂದು ಫಿರ್ಯಾದಿ ನೀಲವ್ವ ಹಾಗೂ ಉಳಿದವರು ಕೇಳಿದ್ದಾರೆ. ಆಗ ಆರೋಪಿತರು ನಾವು ದುಡ್ಡನ್ನೂ ಕೊಡುವದಿಲ್ಲ, ಪ್ಲಾಟನ್ನೂ ಕೊಡುವದಿಲ್ಲ, ನೀವೆಲ್ಲ ಏನು ಮಾಡ್ತೀರೋ ಮಾಡ್ಕೊಳ್ಳಿ. ನಿಮ್ಮ ಸೊಕ್ಕು ಬಹಳವಾಯ್ತು. ನೀವೀಗ ಇಲ್ಲಿಂದ ಹೊದರೆ ಸರಿ. ಇಲ್ಲಾಂದ್ರೆ ಒಂದು ಗತಿ ಕಾಣಿಸ್ತೀವಿ ಎಂದು ಜಾತಿನಿಂದನೆ ಮಾಡಿದ್ದಲ್ಲದೇ ಜೀವಬೆದರಿಕೆಯನ್ನು ಹಾಕಿ ಮೋಸ ಮಾಡಿದ ಬಗ್ಗೆ ದೂರಿನಲ್ಲಿ ಆರೋಪಿಸಿಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಗಜೇಂದ್ರಗಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here