ಸ್ಥಳೀಯರ ಮನವೊಲಿಸಿ ಹೊರ ತಂದ ಪೊಲೀಸರು…..
ವಿಜಯಸಾಕ್ಷಿ ಸುದ್ದಿ, ಬೆಟಗೇರಿ
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹದಗೆಟ್ಟ ರಸ್ತೆಯಿಂದ ಆಕ್ರೋಶಗೊಂಡ ಜನರು ನಗರಸಭೆ ಸದಸ್ಯರೊಬ್ಬರನ್ನು ಕೂಡಿ ಹಾಕಿದ ಘಟನೆ ಬೆಟಗೇರಿಯ ಬಣ್ಣದನಗರದಲ್ಲಿ ಜರುಗಿದೆ.
ಬೆಟಗೇರಿಯ ಮೂರನೇ ವಾರ್ಡ್ ನಲ್ಲಿ ಈ ಘಟನೆ ಜರುಗಿದ್ದು, ನಗರಸಭೆಯ ಬಿಜೆಪಿ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಸಮಸ್ಯೆ ಆಲಿಸಿಲು ಕರೆಸಿಕೊಂಡು ಸಾರ್ವಜನಿಕರು ಕೂಡಿ ಹಾಕಿದ್ದಾರೆ.
ಈಶ್ವರ ಸೇವಾ ಟ್ರಸ್ಟ್ ಕಮಿಟಿ ಕಛೇರಿಯಲ್ಲಿ ಮುಂಜಾನೆ 10-30ರ ಸುಮಾರಿಗೆ ಕೂಡಿ ಹಾಕಿದ್ದಾರೆ. ಕೂಡಿ ಹಾಕಿ ಮೂರು ಗಂಟೆಯಾದರೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಸದಸ್ಯ ಮಾಧುಸಾ ಅವರು, ನಗರಸಭೆ ಆಯುಕ್ತರಿಗೆ ಫೋನ್ ಮಾಡಿದ್ರೂ ಅವರು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ವಾರ್ಡ್ ನಲ್ಲಿ ಚರಂಡಿ, ಕುಡಿಯುವ ನೀರು, ಬೀದಿ ದೀಪ, ರಸ್ತೆ ಹದಗೆಟ್ಟಿವೆ. ಈ ಕುರಿತು ಸದಸ್ಯನಿಗೆ ಹಲವಾರು ಬಾರಿ ಮನವಿ ಮಾಡಿದ್ರೂ ಅವರು ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂಬ ಮಾತುಗಳು ಕೇಳಿ ಬಂದವು.
ಹೀಗಾಗಿ ಇವತ್ತು ವಾರ್ಡ್ ಗೆ ಕರೆಸಿ ಕೂಡಿ ಹಾಕಿ ಸಾರ್ವಜನಿಕರು ಬಿಸಿ ತಟ್ಟಿಸಿದ್ದಾರೆ.
ಸುದ್ದಿ ತಿಳಿದ ಬೆಟಗೇರಿ ಪೊಲೀಸರು ಭೇಟಿ ನೀಡಿ, ಸ್ಥಳೀಯರ ಮನವೊಲಿಸಿ ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಈಶ್ವರ ಸೇವಾ ಟ್ರಸ್ಟ್ ಕಚೇರಿಯಿಂದ ಹೊರತಂದಿದ್ದಾರೆ.