ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದು ಎಂಬುದಾಗಿ Pandit Modi Bettappa Astrology ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿದ್ದ ಜಾಹೀರಾತನ್ನು ನೋಡಿದ ಮಹಿಳೆಯೊಬ್ಬಳು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜರುಗಿದೆ.
ಕೌಟುಂಬಿಕ ಸಮಸ್ಯೆ ಇದ್ದಂತಹ ಮಹಿಳೆ ಜಾಹೀರಾತಿನಲ್ಲಿದ್ದ ಫೋನ್ ನಂಬರ್ ಗಳಿಗೆ ಕರೆ ಮಾಡಿ ಸಮಸ್ಯೆ ಸರಿ ಮಾಡಿಕೊಡಿ ಎಂದು ಕೇಳಿಕೊಂಡಿದ್ದಳು.
ಆಗ ವಂಚಕ ನಿಮ್ಮ ಹೆಸರಿನಲ್ಲಿ ಪೂಜೆ ಮಾಡುತ್ತೇನೆ ರೂ. 7,000.00 ಹಣ ಖರ್ಚಾಗುತ್ತೆ ಎಂದು ಹೇಳಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು, ಪುನಃ ಬೇರೆ ಬೇರೆ ಪೂಜೆ ಮಾಡಬೇಕು ಸಮಸ್ಯೆ ಸರಿ ಆಗುತ್ತೆ ಎಂದು ಹಂತ ಹಂತವಾಗಿ ಒಟ್ಟು ರೂ. 1,16,001.00 ಹಣ ವರ್ಗಾವಣೆ ಮಾಡಿಸಿಕೊಂಡಿದ್ದ.
ಇಷ್ಟಾದರೂ ವಂಚಕ ಇನ್ನು ಹಲವು ಸಮಸ್ಯೆಗಳಿವೆ ಎಂದು ಹೇಳಿ ಪೂಜೆ ಖರ್ಚಿಗೆ ಹಣ ಕಳುಹಿಸಿ ಎಂದು ಹೇಳಿದಾಗ ಮಹಿಳೆ ಅನುಮಾನಗೊಂಡು ಚಿಕ್ಕಮಗಳೂರು ಜಿಲ್ಲಾ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಪ್ರಕರಣ ದಾಖಲು ಮಾಡಿಕೊಂಡ ಸಿಇಎನ್ ಠಾಣೆಯ ಪೊಲೀಸರು, ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದೆಂದು ನಂಬಿಸಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು, ಆತನಿಂದ ರೂ. 87,500.00 ನಗದು, ಒಂದು ಮೊಬೈಲ್ ಫೋನ್ ಮತ್ತು ಎರಡು ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದಲ್ಲಿ ಪಿಐ ಮುತ್ತರಾಜ್, ಪಿಎಸ್ಐ ನಾಸೀರ್ ಹುಸೇನ್ ಮತ್ತು ರಘುನಾಥ್ ಎಸ್. ವಿ., ಎಎಸ್ಐ ಎಂ. ಸಿ. ಪ್ರಕಾಶ್ ಮತ್ತು ಸಿಬ್ಬಂದಿಗಳಾದ ವಿನಾಯಕ ಹಾಗೂ ಅನ್ವರ್ ಪಾಷಾ ಇದ್ದರು.
ಸಾರ್ವಜನಿಕರು ಇಂತಹ ವಂಚನೆಗಳ ಜಾಲಕ್ಕೆ ಬೀಳದೇ ಎಚ್ಚರ ವಹಿಸಲು ಪೊಲೀಸರು ತಿಳಿಸಿದ್ದಾರೆ.


