ವಿಜಯಸಾಕ್ಷಿ ಸುದ್ದಿ, ದಾವಣಗೆರೆ
ಚುನಾವಣೆ ಹತ್ತಿರಾಗುತ್ತಿದ್ದಂತೆಯೇ ರಾಜ್ಯದ ರಾಜಕೀಯ ಕ್ಷೇತ್ರ ಗರಿಗೆದರತೊಡಗಿದೆ. ಹಲವರು ತಮಗೆ ಯಾವ ಕ್ಷೇತ್ರದಿಂದ ಟಿಕೆಟ್ ಸಿಗಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿದರೆ, ಟಿಕೆಟ್ ಸಿಗುವ ಬಗ್ಗೆ ಖಾತ್ರಿ ಹೊಂದಿರುವ ಉಮೇದುವಾರಿಗಳು ಗೆಲುವಿನತ್ತ ಈಗಲೇ ವಿವಿಧ ಬಾಣಗಳ ಪ್ರಯೋಗಕ್ಕೆ ರಂಗಸ್ಥಳ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಇನ್ನು, ಪದೇ ಪದೇ ಅಧಿಕಾರವರಸಿ ಪಕ್ಷಾಂತರ ಪರ್ವದಲ್ಲಿ ಸಕ್ರಿಯರಾಗಿರುವವರು ಈ ಸಮಯದಲ್ಲಿ ಯಾವ ಪಕ್ಷಕ್ಕೆ ನೆಗೆಯಲಿ ಎಂದು ಲೆಕ್ಕಾಚಾರ ಹಾಕತೊಡಗಿದ್ದಾರೆ. ಇದರ ಬೆನ್ನಲ್ಲೇ ಪ್ರಬಲ ಟಿಕೆಟ್ ಆಕಾಂಕ್ಷಿಯೊಬ್ಬರು ಪಕ್ಷವನ್ನಲ್ಲ, ದೇಶವನ್ನೇ ಬಿಟ್ಟು ವಿದೇಶಕ್ಕೆ ಹಾರಿರುವ ಪ್ರಕರಣವೊಂದು ಸುದ್ದಿಯಾಗಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಕೆ.ಸಿ. ವೀರೇಂದ್ರ(ಪಪ್ಪಿ) ಸಧ್ಯ ನಾಪತ್ತೆಯಾಗಿದ್ದಾರೆ. ಇವರ ವಿರುದ್ಧ ದಾವಣಗೆರೆಯಲ್ಲಿ ೪೨೦ ಪ್ರಕರಣವೂ ದಾಖಲಾಗಿದೆ. ಸದರಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಪಪ್ಪಿ ತಲೆಮರೆಸಿಕೊಂಡು ದೇಶ ಬಿಟ್ಟು ಹೋಗಿದ್ದಾರೆ. ಕೆ.ಸಿ. ವೀರೇಂದ್ರರ ವಿರುದ್ಧ ೪೨೦ ಕೇಸ್ ದಾಖಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಜೂಟ್ ಹೇಳಿದ್ದಾರೆ.
ಅಂದ ಹಾಗೆ, ಕಳೆದ ಬಾರಿಯ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಪ್ಪಿ, ಗೋವಾ ಕ್ಯಾಸಿನೋದಲ್ಲಿ ದಂಧೆ, ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ಗಳಲ್ಲಿ ಸಕ್ರಿಯರಾಗಿದ್ದರು.
ಅ.23ರಂದು ನಡೆದಿದ್ದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಹೇರಳ ಹಣ ನೀಡುವದಾಗಿ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸಿ, ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ದಾವಣಗೆರೆಯ ವೆಂಕಟೇಶ್ ಎಂಬುವವರು ಇಲ್ಲಿನ ಕಿರಣ್, ಚೇತನ್, ಸೂರಜ್ ಕುಟ್ಟಿ ಹಾಗೂ ಚಿತ್ರದುರ್ಗದ ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ದೂರು ದಾಖಲಿಸಿದ್ದರು.
ಕಿರಣ್, ಚೇತನ್ ಎಂಬಿಬ್ಬರನ್ನು ಬಂಧಿಸಿ, 7 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡ ಪೊಲೀಸರು ಇನ್ನಿಬ್ಬರು ಆರೋಪಿಗಳಾದ ವೀರೇಂದ್ರ ಪಪ್ಪಿ ಹಾಗೂ ಸೂರಜ್ ಕುಟ್ಟಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ವಿಷಯ ತಿಳಿಯುತ್ತಿದ್ದಂತೆಯೇ ವೀರೇಂದ್ರ ಪಪ್ಪಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಮುಂದುವರಿದ ಹಂತವಾಗಿ, ಕೆ.ಸಿ. ವೀರೇಂದ್ರ ಪಪ್ಪಿ ಬ್ಯಾಂಕ್ ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಚಳ್ಳಕೆರೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಖಾತೆಯೂ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಖಾತೆಗಳನ್ನು ಸೀಜ್ ಮಾಡಿದ್ದಾರೆ.
ಇದೀಗ ಪಪ್ಪಿ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ ಮಾಡಿರುವ ಪೊಲೀಸರು, ಭಾರತದ ಯಾವುದೇ ಏರ್‌ಪೋರ್ಟ್ನಲ್ಲಿ ಕಾಣಿಸಿಕೊಂಡರೂ ತಕ್ಷಣ ಬಂಧಿಸುವAತೆ ನೊಟೀಸ್ ಹೊರಡಿಸಿದ್ದಾರೆ.
ಸ್ಥಳೀಯ ನ್ಯಾಯಾಲಯವು ಪಪ್ಪಿ ಪರವಾದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಪಪ್ಪಿ ಪರ ವಕೀಲರು ಜಾಮೀಮಿನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೆಲ ಸಮಯ ತಲೆಮರೆಸಿಕೊಂಡರೂ, ಶೀಘ್ರವೇ ತಲೆಮರೆಸಿಕೊಂಡಿರುವ ಪಪ್ಪಿ ಸೇರಿದಂತೆ ಇನ್ನೊಬ್ಬ ಆರೋಪಿಯನ್ನೂ ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.