ಅಂತರ್‌ಜಿಲ್ಲಾ ಕಳ್ಳನ ಬಂಧನ; ನೀರಿನ ಬಾಟಲಿ ಖರೀದಿಸುವ ಸೋಗಿನಲ್ಲಿ ಮಹಿಳೆಯ ಮಾಂಗಲ್ಯಸರ ಕಿತ್ತು ಪರಾರಿಯಾಗಿದ್ದ ಖದೀಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕಿರಾಣಿ ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಸುವ ಸೋಗಿನಲ್ಲಿ ಬಂದು ಅದೇ ಅಂಗಡಿಯಲ್ಲಿ ವಸ್ತು ಖರೀದಿಸುತ್ತಿದ್ದ ಮಹಿಳೆಯೊಬ್ಬಳ ಕತ್ತಿನಲ್ಲಿದ್ದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗದಗ ಶಹರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅ.18ರಂದು ಮಧ್ಯಾಹ್ನ 3.10ರ ಸಮಯದಲ್ಲಿ ನಗರದ ಬ್ಯಾಂಕರ್ಸ್ ಕಾಲೋನಿಯ ಶೋಭಾ ಆಸ್ಪತ್ರೆಯ ಹಿಂಭಾಗದಲ್ಲಿರುವ ಗಾಯತ್ರಿ ಉಡುಪಿ ಇವರ ಕಿರಾಣಿ ಅಂಗಡಿಯಲ್ಲಿ ಬಿಸ್ಕತ್ ಖರೀದಿಸುತ್ತಿರುವಾಗ ಸುಮಾರು 25-28 ವಯಸ್ಸಿನ, ತೆಳ್ಳನೆಯ ಮೈಕಟ್ಟಿನ ಇಬ್ಬರು ಆರೋಪಿಗಳು ಕಪ್ಪು ಬಣ್ಣದ ಬೈಕ್ ಮೇಲೆ ಬಂದರು.

ಹಿಂದೆ ಕುಳಿತವನು ಅಂಗಡಿ ಬಳಿಗೆ ಬಂದು ಎರಡು ಲೀ. ನೀರಿನ ಬಾಟಲಿಯನ್ನು ಕೇಳಿ, ದೂರುದಾರೆ ಬ್ಯಾಂಕರ್ಸ್ ಕಾಲೋನಿಯ ಸುಮನ ಗಂಗಾಧರ ಜಿತೂರಿ ಕೊರಳಲ್ಲಿದ್ದ ಸುಮಾರು 40 ಗ್ರಾಂ. ತೂಕದ ಬಂಗಾರದ ಪದಕವಿದ್ದ 1.2 ಲಕ್ಷ ರೂ. ಬೆಲೆಬಾಳುವ ತಾಳಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಘಟನೆಯ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಬೇಧಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾರ್ಗದರ್ಶನದಲ್ಲಿ ಗದಗ ಡಿಎಸ್‌ಪಿ ಶಿವಾನಂದ ಪವಾಡಶೆಟ್ಟರ ನೇತೃತ್ವದಲ್ಲಿ ಪಿಐ ಜಯಂತ ಗೌಳಿ, ಮಹಿಳಾ ಪಿಎಸ್‌ಐ ಬಿ.ಆರ್. ಬಂಕಾಪೂರ, ಸಿಬ್ಬಂದಿಗಳಾದ ವೈ.ಬಿ. ಪಾಟೀಲ, ಎಸ್.ಎಸ್. ಮಾವಿನಕಾಯಿ, ಯು.ಎಫ್. ಸುಣಗಾರ, ಕೆ.ಡಿ. ಜಮಾದಾರ, ಪಿ.ಎಸ್. ಕಲ್ಲೂರ, ಪಿ.ಎ. ಭರಮಗೌಡ್ರ, ಅಣ್ಣಪ್ಪ ಕವಲೂರ, ಟೆಕ್ನಿಕಲ್ ವಿಭಾಗದ ಗುರುರಾಜ ಬೂದಿಹಾಳರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಸದರಿ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣವನ್ನು ಬೇಧಿಸಿ, ದಾವಣಗೆರೆಯ ಹರಿಹರ ಟಿಪ್ಪು ನಗರದ ಇರಾನಿ ಕಾಲೋನಿಯ ಗಾಜಿ ಅಬ್ಬಾಸಖಾನ್ @ಜೋಹೇರ ಅಬ್ಬಾಸಖಾನ್ ಮೋಶೀಮ್‌ಖಾನ್ ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 1.2 ಲಕ್ಷ ರೂ. ಬೆಲೆಬಾಳುವ 40 ಗ್ರಾಂ ತೂಕದ ಕಳುವಾದ ತಾಳಿಸರವನ್ನು ವಶಪಡಿಸಿಕೊಂಡಿದ್ದಾರೆ.

ತನಿಖಾ ತಂಡದ ಕಾರ್ಯಾಚರಣೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಶ್ಲಾಘಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here