ವಿಮಾ ಕಂಪನಿಗೆ ಬಿಸಿ ಮುಟ್ಟಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ; ಪರಿಹಾರ ಪಡೆದ ಅಜ್ಜ-ಮೊಮ್ಮಗಳು….

0
Spread the love

ನ್ಯಾಯವಾದಿ ಎಸ್ ಕೆ ನದಾಫ್ ಅವರ ಸಮರ್ಥ ವಾದದಿಂದ ಗ್ರಾಹಕ ನ್ಯಾಯಾಲಯದಲ್ಲಿ ಪರಿಹಾರ ಪಡೆದ ಗ್ರಾಹಕರು…

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಮನೆ ನಿರ್ಮಾಣಕ್ಕೆ ಪಡೆದಿದ್ದ 30 ಲಕ್ಷ ರೂ. ಸಾಲಕ್ಕೆ ಅಷ್ಟೇ ಮೊತ್ತದ ವಿಮಾ ಪಾಲಿಸಿ ಪಡೆದು ಪ್ರೀಮಿಯಂ ಕಟ್ಟಿದ್ದ ಗ್ರಾಹಕರೊಬ್ಬರ ಸಾವಿನ ನಂತರ, ಸಾಲದಿಂದ ಮುಕ್ತಿಗೆ ವಿಮಾ ಹಣ ಪಾವತಿಸಲು ನಿರಾಕರಿಸಿದ್ದು, ಈ ಬಗ್ಗೆ ಯುನೈಟೆಡ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ಇಲ್ಲಿನ ವಿವೇಕಾನಂದ ನಗರದಲ್ಲಿ ವಾಸವಾಗಿರುವ ಶಿಕ್ಷಕಿ ಕವಿತಾ ಲಾಲಪ್ಪ ಪೂಜಾರರು ಗದುಗಿನ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಮನೆ ಕಟ್ಟಿಸುವ ಸಲುವಾಗಿ 30 ಲಕ್ಷ ರೂ.ಗಳ ಸಾಲ ಪಡೆದಿದ್ದರು. ಸದರಿ ಸಾಲಕ್ಕೆ ಯುನೈಟೆಡ್ ಇನ್ಸುರೆನ್ಸ್ ಇಂಡಿಯಾ ಕಂ. ಲಿ ಇವರಲ್ಲಿ ವಿಮೆ ಪಡೆದಿದ್ದರು. ತನ್ನ ಗಂಡ ಸೇವಾ ನಾಯಕ ಹಾಗೂ ಕವಿತಾ ಇವರ ಮಧ್ಯೆ ಭಿನ್ನಾಭಿಪ್ರಾಯ ಇದ್ದುದರಿಂದ ಅನೇಕ ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ತನ್ನ ಅಲ್ಪವಹಿ ಮಗಳು ಹರ್ಷಿತಾ ಇವಳ ಸಂರಕ್ಷಣೆದಾರ ಎಂದು ಕವಿತಾಳ ತಂದೆ ಲಾಲಪ್ಪ ಶಿವಪ್ಪ ಪೂಜಾರ ಇವರಿಗೆ ಮೃತ್ಯುಪತ್ರವನ್ನು ಬರೆದುಕೊಟ್ಟು ನೋಂದಣಿ ಮಾಡಿಸಿದ್ದರು.

7-5-2021ರಂದು ಕೋವಿಡ್-19ರಿಂದ ಕವಿತಾ ಮೃತಪಟ್ಟಿದ್ದರು. ನಂತರ ಹರ್ಷಿತಾ ಪರವಾಗಿ ಅಜ್ಜ ಲಾಲಪ್ಪ ಪೂಜಾರ, ಬ್ಯಾಂಕ್ ಹಾಗೂ ವಿಮಾ ಕಂಪನಿಗೆ ದಾಖಲೆಗಳನ್ನು ಹಾಜರುಪಡಿಸಿ ಕವಿತಾಳ ಹೆಸರಿನಲ್ಲಿದ್ದ ಸಾಲವನ್ನು ವಿಮಾ ಕಂಪನಿಯವರು ತೀರಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ, ಹರ್ಷಿತಾಳ ತಂದೆ ಬದುಕಿರುವಾಗ, ಅಲ್ಲ ಸಂರಕ್ಷಣೆದಾರರಾಗುವುದಿಲ್ಲ ಎಂಬ ಕಾರಣ ಹೇಳಿ ಸಾಲದ ಹಣ ತೀರಿಸಲು ನಿರಾಕರಿಸಿದ್ದರು.

ತಾಯಿ ಸರ್ಕಾರಿ ನೌಕರಳಾಗಿದ್ದರೂ ಮಗಳು ಅಲ್ಪವಯಿ. ತಂದೆಯೂ ಇಲ್ಲ. ಅಲ್ಪವಯಿ ಕಾರಣಕ್ಕೆ ತಾಯಿಯ ಪಿಂಚಣಿಯೂ ಬರುವುದಿಲ್ಲ. ಅತ್ತ ಅನುಕಂಪದ ಆಧಾರದ ನೌಕರಿಯೂ ಬರುವುದಿಲ್ಲ. ಈ ವೇಳೆ ದಿಕ್ಕು ತೋಚದ ಹರ್ಷಿತಾ, ಬ್ಯಾಂಕ್, ವಿಮಾ ಕಂಪನಿ ಸ್ಪಂದಿಸದೇ ಇರುವುದರಿಂದ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.

ಅತ್ತ ಕೆನರಾ ಬ್ಯಾಂಕ್‌ನವರು ಬ್ಯಾಂಕ್‌ನವರು ಸಾಲ ವಸೂಲಿಗೆ ಬೆಂಗಳೂರಿನ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ.

ಗದಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅರ್ಜಿದಾರರ ಪರ ನ್ಯಾಯವಾದಿ ಎಸ್ ಕೆ ನದಾಫ್ ಅವರು ವಾದ ಮಾಡಿ, ಕೊರೊನಾ ಸಾವು ಕೂಡ ಆಕಸ್ಮಿಕ ವ್ಯಾಪ್ತಿಗೆ ಬರುತ್ತದೆ. ಬ್ಯಾಂಕ್, ವಿಮಾ ಕಂಪನಿ ಸೇವಾ ನ್ಯೂನ್ಯತೆ ಪರಿಗಣಿಸಿ, ಈ ಕುಟಂಬವನ್ನು ಸಾಲದಿಂದ ಮುಕ್ತಿ ಮಾಡಿ, ಮಾನಸಿಕ ಪರಿಹಾರ ಹಾಗೂ ಪ್ರಕರಣ ಖರ್ಚು ಭರಿಸುವಂತೆ ವಾದ ಮಂಡಿಸಿದ್ದರು.

ಇದಕ್ಕೆ ಪೂರಕವಾದ ಸುಪ್ರೀಂ ಕೋರ್ಟ್ ಹಾಗೂ ಗ್ರಾಹಕ ಆಯೋಗಗಳ ಹಲವು ಪ್ರಕರಣಗಳ ಆದೇಶ ಹಾಜರುಪಡಿಸಿದ್ದರು.

ಅರ್ಜಿದಾರರ ವಾದ-ವಿಮಾ ಕಂಪನಿಯ ಪ್ರತಿವಾದ ಆಲಿಸಿದ ಗದಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ಕೋವಿಡ್ ಸಾವು ಕೂಡ ಅಸಹಜ. ಕೋವಿಡ್ ಸೋಂಕು ಇಡೀ ಜಗತ್ತಿಗೆ ಆವರಿಸಿತ್ತು. ಈ ವೇಳೆ ವಿಮಾ ಕಂಪನಿಗಳು ಕೂಡ ವಿಮಾ ಪರಿಹಾರ ನೀಡಿವೆ. ಅಪಘಾತ ಕೇವಲ ವಾಹನದಿಂದ ಆಗಬೇಕೆಂದಿಲ್ಲ ಎಂದು ಹೇಳಿ, ವಿಮಾ ಕಂಪನಿಯು ಕೂಡಲೇ 30 ಲಕ್ಷ ರೂ. ವಿಮಾ ಪರಿಹಾರ ನೀಡಬೇಕು.

ಇದರೊಂದಿಗೆ ಪರಿಹಾರವಾಗಿ 30 ಸಾವಿರ ರೂ. ಹಾಗೂ ಪ್ರಕರಣದ ಖರ್ಚು ಎಂದು 15 ಸಾವಿರ ರೂ. ಪಾವತಿಸಬೇಕು. ಸಾಲ ನೀಡಿದ ಬ್ಯಾಂಕ್ ಕೂಡ ಸಾಲದ ಹಣ ಮುಟ್ಟಿದ ಒಂದು ತಿಂಗಳ ಒಳಗಾಗಿ ‘ಕ್ಲಿಯರೆನ್ಸ್’ ಸರ್ಟಿಫಿಕೇಟ್ ನೀಡಬೇಕು ಎಂದೂ ಆದೇಶ ನೀಡಿದೆ.

ಪ್ರಕರಣದಲ್ಲಿ ಫಿರ್ಯಾದಿದಾರರ ಪರವಾಗಿ ವಕೀಲರಾದ ಎಸ್ ಕೆ ನದಾಫ್ ವಾದ ಮಂಡಿಸಿದ್ದರು.

ಕೋವಿಡ್ ಸಾಂಕ್ರಾಮಿಕ ಖಾಯಿಲೆ ಇಡೀ ಜಗತ್ತಿಗೇ ಅಂಟಿಕೊಂಡಿತ್ತು. ಈ ಸೋಂಕಿನಿಂದ ಸಾವನ್ನಪ್ಪಿದವರಿಗೆ ವಿಮಾ ಪರಿಹಾರ ನೀಡಲು ನಿರಾಕರಿಸಿದರೆ, ಅವರ ಹಕ್ಕನ್ನು ಮೊಟಕುಗೊಳಿಸಿದಂತೆ. ಗ್ರಾಹಕ ನ್ಯಾಯಾಲಯವು ಈ ಹಕ್ಕನ್ನು ಎತ್ತಿಹಿಡಿದಿದೆ.

-ಎಸ್. ಕೆ.ನದಾಫ್. ಗ್ರಾಹಕ ಫಿರ್ಯಾದಿದಾರರ ಪರ ವಕೀಲರು.

Spread the love

LEAVE A REPLY

Please enter your comment!
Please enter your name here