ತುರ್ತು ಸಂದರ್ಭದಲ್ಲಿ ಜೀವ ರಕ್ಷಿಸಿದ ERSS-112 ತಂಡ; ಎರಡು ತಿಂಗಳಲ್ಲಿ ನಾಲ್ವರ ರಕ್ಷಣೆ

0
Spread the love

ಸಾರ್ವಜನಿಕರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರವು ಹೊಸದಾಗಿ ಜಾರಿಗೆ ತಂದಿರುವ ERSS-112 ಯೋಜನೆಯ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳು ಸಾರ್ವಜನಿಕರಿಂದ ಸ್ವೀಕೃತವಾಗುವ ತುರ್ತು ಕರೆಗಳಿಗೆ ಶೀಘ್ರವಾಗಿ ಸ್ಪಂದಿಸಿ, ಘಟನಾ ಸ್ಥಳಕ್ಕೆ ತೆರಳಿ, ರಕ್ಷಣಾ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನ.22ರಂದು ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಿಮಡಿಯಿಂದ ಓರ್ವ ಮಹಿಳೆ ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಬಳಿ ಬಂದಿದ್ದಾನೆ ಎಂದು ವಿಡಿಯೋ ಕರೆಯ ಮೂಲಕ ತಿಳಿಸಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ, ಕರ್ತವ್ಯದಲ್ಲಿದ್ದ ಪಿ.ಎಚ್. ಮುಂಡರಗಿ, ಎಎಸ್‌ಐ ಬಿ.ಎಂ. ಕುರ್ತಕೋಟಿ, ಎಲ್.ಎಚ್. ತಿರುಮಲೆ, ಚಾಲಕ ಎನ್.ಎಫ್. ಹೆಬ್ಬಳ್ಳಿ ತಕ್ಷಣವೇ ಗಂಗಿಮಡಿ ರೈಲ್ವೆ ಹಳಿಯ ಬಳಿ ತಲುಪಿದಾಗ, ಸದರಿ ವ್ಯಕ್ತಿ ಆತ್ಮಹತ್ಯೆಯ ಉದ್ದೇಶದಿಂದ ರೈಲ್ವೆ ಹಳಿಯ ಮೇಲೆ ಮಲಗಿದ್ದು, ಸಿಬ್ಬಂದಿಗಳು ಆ ವ್ಯಕ್ತಿಗೆ ತಿಳುವಳಿಕೆ ಹೇಳಿ, ಮನವೊಲಿಸಿ ರಕ್ಷಿಸಿದ್ದರು.

ಅಂತೆಯೇ, ಅಕ್ಟೋಬರ್ 1ರ ಮಧ್ಯರಾತ್ರಿಯ ಸಮಯದಲ್ಲಿ ವಿಪರೀತ ಮಳೆಯಿಂದ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡೂರು ರಸ್ತೆಯ ಹಳ್ಳ ತುಂಬಿ ಹರಿಯುತ್ತಿದ್ದಾಗ, ವಾಹನವೊಂದರಲ್ಲಿದ್ದ ೩ ಜನರು ಹಳ್ಳ ದಾಟುತ್ತಿರುವಾಗ ಹಳ್ಳದಲ್ಲಿಯೇ ಸಿಲುಕಿಕೊಂಡಿದ್ದರು.

ಈ ವಿಷಯವಾಗಿ ಸಹಾಯವಾಣಿಗೆ ತುರ್ತು ಕರೆ ಬಂದಾಗ, ಕರ್ತವ್ಯದಲ್ಲಿದ್ದ ಎಎಸ್‌ಐ ಎಂ.ಎಸ್. ದೇಸಾಯಿ, ಎನ್.ಬಿ. ಪಾಟೀಲ, ಎಎಸ್‌ಐ ಐ.ಕೆ. ತಾವರಗೇರ್, ಎನ್.ಎಂ. ಕೊಟಗಿ, ಚಾಲಕ ಬಿ.ವಿ. ಖಾನಾಪುರ ತಕ್ಷಣ ಸ್ಪಂದಿಸಿ, ಅಪಾಯದಲ್ಲಿದ್ದವರನ್ನು ರಕ್ಷಿಸಿ, ಸುರಕ್ಷಿತ ಜಾಗಕ್ಕೆ ತಲುಪಿಸಿದ್ದರು.

ರಕ್ಷಣಾ ಕಾರ್ಯದಲ್ಲಿ ತುರ್ತು ಸ್ಪಂದನೆ ನೀಡಿ ಸಂಭವಿಸಲಿದ್ದ ಅಪಾಯದಿಂದ ಜೀವಗಳನ್ನು ರಕ್ಷಿಸಿದ ಸಿಬ್ಬಂದಿಗಳ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಅಧೀಕ್ಷಕರು, ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here