ವಿಜಯಸಾಕ್ಷಿ ಸುದ್ದಿ, ಗದಗ
ಅಪ್ರಾಪ್ತೆಯೊಬ್ಬಳಿಗೆ 20 ರೂ. ಆಮಿಷ ತೋರಿಸಿ, ಪಾಳು ಕಟ್ಟಡಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟೂ ೮ ಲಕ್ಷ ರೂ.ಗಳ ದಂಡ ಹಾಗೂ ಪರಿಹಾರವನ್ನು ನೀಡುವಂತೆ ಆದೇಶಿಸಿದೆ ಎಸ್ಪಿ ಶಿವಪ್ರಕಾಶ ದೇವರಾಜು ಹಾಗೂ ವಿಶೇಷ ಸರಕಾರಿ ಅಭಿಯೋಜಕ ಅಮರೇಶ್ ಉಮಾಪತಿ ಹಿರೇಮಠ ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.
ಪ್ರಕರಣದ ವಿವರ
ಆರೋಪಿ ಬೆಟಗೇರಿಯ ಹೊಸಪೇಟ ಚಕ್ ಓಣಿಯ ವೆಂಕಟೇಶ ದೊಡ್ಡಶಿವಪ್ಪ ಶಾವಿ ಎಂಬ ವ್ಯಕ್ತಿಯು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗೆಳತಿಯರೊಂದಿಗೆ ಗಣೇಶ ಮೂರ್ತಿಗಳನ್ನು ನೋಡಲು ಹೋಗಿದ್ದ ಸಂದರ್ಭದಲ್ಲಿ 12 ವರ್ಷದ ನೊಂದ ಬಾಲಕಿಗೆ 20 ರೂಪಾಯಿ ನೀಡುವದಾಗಿ ಆಮಿಷ ತೋರಿಸಿ, ಪಾಳು ಬಿದ್ದಿದ್ದ ಕಟ್ಟಡವೊಂದದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ.
ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಕಲಂ 371(1), 376(ಎ)(ಬಿ) ಐಪಿಸಿ ಕಲಂ 6 ಪೋಕ್ಸೋ ಕಾಯ್ದೆ-2012ರಡಿಯಲ್ಲಿ ಅಪರಾಧವೆಸಗಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಪ್ರಕರಣದಲ್ಲಿ ಸಿಪಿಐ ವೆಂಕಟೇಶ ಯಡಹಳ್ಳಿ ಪ್ರಕರಣ ದಾಖಲಿಸಿಕೊಂಡು, 25-10-2019ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ಥನಿಗೆ 25 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವಾಗಿ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಅಲ್ಲದೆ, ನೊಂದ ಬಾಲಕಿಗೆ ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ, ಪುನರ್ವಸತಿಗಾಗಿ 7 ಲಕ್ಷ ರೂ.ಗಳನ್ನು National Legal Services Authority (NALSA) ನೀಡುವಂತೆ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ವರ ಶೆಟ್ಟಿಯವರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.