13ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದ 13ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಗೂಳಪ್ಪ (ಮುತ್ತು) ಹನುಮಂತಪ್ಪ ಮುಶಿಗೇರಿ ಅವರ ಪರವಾಗಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.
ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ಅನಿಲ್ ಅವರು, 13ನೇ ವಾರ್ಡ್ ನಲ್ಲಿರುವ ಸಮಸ್ಯೆಗಳನ್ನು ಮತದಾರರಿಂದ ಆಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಅವರು ಮಾತನಾಡಿ, ‘ಕಳೆದ ಹಲವು ವರ್ಷಗಳಿಂದ ಅವಳಿ ನಗರದಲ್ಲಿ ಕಾಂಗ್ರೆಸ್ಸಿಗರ ಇಚ್ಛಾಶಕ್ತಿಯ ಕೊರತೆಯಿಂದಾಗಿ ನೀರು, ಚರಂಡಿ, ರಸ್ತೆ, ವಿದ್ಯುತ್ ಸಮಸ್ಯೆ ತಪ್ಪುತ್ತಿಲ್ಲ. ಈ ಹಿಂದೆ ನಗರಸಭೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಅಲ್ಲದೇ, ಅವಳಿ ನಗರದ ಜನ ಇಬ್ಬರು ಪಾಟೀಲರನ್ನಷ್ಟೇ ನೋಡಿದ್ದಾರೆ.
ಆದರೆ ನಮ್ಮ ಸಿ ಸಿ ಪಾಟೀಲರು ಹಾಗಲ್ಲ, ಅಭಿವೃದ್ಧಿ ಪರ ಪಾಟೀಲರು. ಜನರ ಬಳಿಯೇ ಬಂದು ಜನರ ಸಮಸ್ಯೆ ಹಾಗೂ ಸಲಹೆ ಪಡೆದು ಯಾವ ರೀತಿ ಅವಳಿ ನಗರವನ್ನು ಅಭಿವೃದ್ಧಿ ಮಾಡಬಹುದು ಎಂಬ ನೀಲ ನಕ್ಷೆ ರೆಡಿ ಮಾಡಿ ಮಾದರಿ ನಗರವನ್ನಾಗಿ ಮಾಡಲು ಶ್ರಮಿಸುವ ಪಾಟೀಲರು ಆಗಿದ್ದಾರೆ ಎಂದ ಅನಿಲ ಮೆಣಸಿನಕಾಯಿ, ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಬಂದು ಮತ ಕೇಳುವ ಅಭ್ಯರ್ಥಿಗಳಿಗೆ ಮತ ನೀಡಬೇಡಿ. ಅವಳಿ ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎನ್ನುವ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು’ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಪತಿ ಉಡುಪಿ, ಪರಮೇಶ ಲಮಾಣಿ, ಕೋಟ್ನಿಕಲ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.