ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ/ಲಕ್ಷ್ಮೇಶ್ವರ
ಪ್ರಾಣಿಗಳೂ ಕೂಡ ಮನುಷ್ಯರಂತೆಯೇ ತಮ್ಮದೇ ಆದ ಹಲವು ಭಾವನೆಗಳನ್ನು, ಆಕಾಂಕ್ಷೆಗಳನ್ನು ಹೊಂದಿರುತ್ತವೆ. ಮಂಗಗಳೂ ಇದಕ್ಕೇನೂ ಹೊರತಾಗಿಲ್ಲ. ಅಂಥ ವಾನರಗಳೇನಾದರೂ ನಮ್ಮ ಬಳಿ ಬಂದು ನಾವು ಉಣ್ಣುತ್ತಿರುವ ತಟ್ಟೆಗೇ ಕೈಹಾಕಿ ತಿನ್ನಲು ಬಂದರೆ `ಹಚ್ಯಾ…’ ಎಂದು ದೂರ ಓಡಿಸುವವರೇ ಹೆಚ್ಚು. ಆದರೀಗ ಹೇಳುತ್ತಿರುವ ವಿಷಯ ಇಂಥ ಘಟನೆಗಳಿಗೆ ಅಪವಾದವೆಂಬಂತಿದೆ.
ಪ್ರತಿವರ್ಷದಂತೆ ಶ್ರಾವಣ ಮಾಸದಲ್ಲಿ ನಡೆಯುವ ಕಪ್ಪತಗುಡ್ಡದ ಕಪ್ಪತ ಮಲ್ಲೆಶ್ವರ ಜಾತ್ರಾ ಮಹೋತ್ಸವ ಬಂದೋಬಸ್ತಿಗೆಂದು ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ತೆರಳಿದ್ದರು.
ಗುರುವಾರ ಮದ್ಯಾಹ್ನ ಊಟ ಮಾಡುವ ಸಮಯಕ್ಕೆ ಜಾಗವರಸುತ್ತ ಸಮೀಪವೇ ಇದ್ದ ದೈವಿ ಉದ್ಯಾನದ ಬಳಿ ತಾವು ತಂದ ಬುತ್ತಿಯನ್ನು ಬಿಚ್ಚಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಊಟ ಪ್ರಾರಂಭಿಸಿದರು. ಅಲ್ಲಿಯೇ ಸುತ್ತಾಡುತ್ತಿದ್ದ ಮಂಗವೊಂದು ಇವರ ಬಳಿ ಬಂದು ಸೀದಾ ತಟ್ಟೆಗೇ ಕೈ ಹಾಕಿ ತುತ್ತು ತಿನ್ನತೊಡಗಿತು!
ಈ ಬಗ್ಗೆ ಸಿಬ್ಬಂದಿ ಶ್ರೀಕಾಂತ್ ಜಂಗಣ್ಣವರ್ ಹೇಳಿದ್ದು ಹೀಗೆ. ` ಊಟ ಮಾಡುತ್ತಿದ್ದಾಗ ಹತ್ತಿರವೇ ಬಂದು ಕುಳಿತುಕೊಂಡಾಗ, ನಾನೂ ಸ್ವಲ್ಪ ಸಿಹಿ ತಿನ್ನಿಸಿದೆ. ಅದಕ್ಕೇನು ರುಚಿಯೆನಿಸಿತೇನೋ, ಮತ್ತೆ ಪಕ್ಕವೇ ಕುಳಿತು ತಟ್ಟೆಗೆ ಕೈಹಾಕಿ ಊಟ ಮಾಡತೊಡಗಿತು. ನಾನೂ ಅದೇ ತಟ್ಟೆಯಲ್ಲಿ ಒಟ್ಟಿಗೇ ಊಟ ಮಾಡಿದೆ. ವೈಯಕ್ತಿಕವಾಗಿ ಆಂಜನೇಯಸ್ವಾಮಿಯೆಂದರೆ ನನಗೆ ಬಹಳ ಭಕ್ತಿ. ಪ್ರತೀ ಶನಿವಾರವೂ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತೇನೆ. ಪ್ರಾಣಿಗಳೆಂದರೂ ಅಷ್ಟೇ ಪ್ರೀತಿ. ಅವೂ ಕೂಡ ನಮ್ಮಂತೆಯೇ ಭಾವನೆಗಳನ್ನು ಹೊಂದಿರುವಾಗ ಬೇಧಭಾವವೇಕೆ? ನನ್ನೊಟ್ಟಿಗಿದ್ದ ಸಿಬ್ಬಂದಿಗಳಾದ ಮುಲ್ಲಾ, ರಾಮಗಿರಿ, ರಾಜೇಶ್ ಕೂಡ ಅಷ್ಟೇ ಪ್ರೀತಿಯಿಂದ ಊಟ ಹಂಚಿಕೊಂಡರು’ ಎಂದಿದ್ದಾರೆ.
ಸಿಬ್ಬಂದಿಯ ಈ ಮಾನವೀಯತೆ ಮೆಚ್ಚಿ ಪಿಎಸ್ಐ ಪ್ರವೀಣ್ ಗಂಗೋಳ ಸಾಮಾಜಿಕ ತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ಪ್ರಶಂಸೆ ವ್ಯಕ್ತವಾಗಿದೆ.