ವಿಜಯಸಾಕ್ಷಿ ಸುದ್ದಿ, ಗದಗ
ಹಳೆಯ ದ್ವೇಷದ ಉದ್ದೇಶಕ್ಕೆ ಮಹಿಳೆಯನ್ನು ಕೊಲೆ ಮಾಡಿ, ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಯ್ನಿಸಿದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಮ್ಮ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಘಟನೆಯ ವಿವರ
ಆರೋಪಿ ಹನುಮಂತಪ್ಪ ದುರಗಪ್ಪ ಬಂಡಿವಡ್ಡರ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ತಿ ಗ್ರಾಮದಲ್ಲಿ ಹಳೆಯ ದ್ವೇಷದಿಂದ 02-10-2015ರಂದು ರಾತ್ರಿ 11-30ರ ಸಮಯಕ್ಕೆ ಲಕ್ಷ್ಮವ್ವ ಎಂಭುವಳ ಮನೆಗೆ ಹೋಗಿ ಹಗ್ಗದಿಂದ ಕುತ್ತಿಗೆಗೆ ಉರುಳು ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಕೊಲೆ ಪ್ರಯತ್ನಕ್ಕೆ ಬಳಸಿದ ಹಗ್ಗವನ್ನು ಹರ್ತಿ ಗ್ರಾಮದ ಜನರು ಬಯಲು ಕಡೆಗೆ ಹೋಗುವ ಗಾಂವಠಾಣಾ ಜಾಗದ ಪಾಳುಬಾವಿಯ ಬಳಿ ಪೊದೆಯಲ್ಲಿ ಎಸೆದು ಬಂದಿದ್ದ.
ಇತ್ತ ಲಕ್ಷ್ಮವ್ವ ಆಸ್ಪತ್ರೆಯಲ್ಲಿ ಉಪಚಾರ ಸಫಲವಾಗದೇ ದಿ. 24.10.2015ರ ಸಂಜೆ 5.30ರ ಹೊತ್ತಿಗೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆರೋಪಿ ಹನುಮಂತಪ್ಪನ ವಿರುದ್ಧ ಗದಗ ಗ್ರಾಮೀಣ ವೃತ್ತದ ವೃತ್ತ ಆರಕ್ಷಕ ಅಂದಿನ ಅಧೀಕ್ಷಕ ಸೋಮಶೇಖರ.ಜಿ. ಜುಟ್ಟಲ್ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ.ಎಸ್. ಶೆಟ್ಟಿ ಸಾಕ್ಷಿ ವಿಚಾರಣೆ ನಡೆಸಿ, ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಆರೋಪಿಗೆ 26.7.2022ರಂದು ಭಾ.ದಂ.ಸಂ ಕಲಂ: 304(2) ರಂತೆ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ ದಂಡ, ಸಾ.ದಂ.ಸಂ. 201 ಅನ್ವಯ 1 ವರ್ಷ ಸಾದಾ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸವಿತಾ.ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ನಡೆಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.