ವಿಜಯಸಾಕ್ಷಿ ಸುದ್ದಿ, ಗದಗ
ಜೀವನದಲ್ಲಿ ಜಿಗುಪ್ಸೆಗೊಂಡು ಮಗಳ ಸಮೇತ ಕಾಲುವೆಯ ನೀರಲ್ಲಿ ಮುಳಗಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆ ಹಾಗೂ ಮಗಳ ಪ್ರಾಣ ERSS 112 ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಉಳಿದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದ 38 ವರ್ಷದ ಮಹಿಳೆ ತನ್ನ ಹದಿನಾಲ್ಕು ವರ್ಷದ ಮಗಳನ್ನು ಕರೆದುಕೊಂಡು ಗ್ರಾಮದ ಸಮೀಪದಲ್ಲಿಯೇ ಇರುವ ದೊಡ್ಡ ಕಾಲುವೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು. ಮಗಳನ್ನು ನೀರಲ್ಲಿ ಮುಳಗಿಸುತ್ತಿದ್ದಂತೆಯೇ ಕಣ್ಣಾರೆ ಕಂಡ ಗ್ರಾಮಸ್ಥರು ERSS 112 ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ 112 ಸಿಬ್ಬಂದಿ ಮಗಳನ್ನು ಹಾಗೂ ತಾಯಿಯನ್ನು ರಕ್ಷಿಸಿದ್ದಾರೆ. ನೀರಲ್ಲಿ ಮುಳಗಿದ್ದ ಹದಿನಾಲ್ಕು ವರ್ಷ ಮಗಳು ನೀರು ಕುಡಿದಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದಳು. ತಕ್ಷಣ ಇಬ್ಬರನ್ನೂ ತಮ್ಮ ವಾಹನದಲ್ಲಿ ಗದಗ ಜಿಮ್ಸ್ ಆಸ್ಪತ್ರೆಗೆ ಕರೆ ತಂದು ಸೂಕ್ತ ಚಿಕಿತ್ಸೆ ಕೊಡಿಸಿದರು.
ಚಿಕಿತ್ಸೆ ನೀಡಿದ ವೈದ್ಯರು, ಇಬ್ಬರು ಪ್ರಾಣಾಪಯದಿಂದ ಪಾರಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದು, ಸಕಾಲಕ್ಕೆ ಕರೆತಂದು ಪ್ರಾಣ ಉಳಿಸಿದ ERSS 112 ಸಿಬ್ಬಂದಿಗಳಾದ ಮುಂಡರಗಿ ಠಾಣೆಯ ಹೆಡ್ ಕಾನಸ್ಟೇಬಲ್ ಕಾಸೀಮಸಾಬ್ ಡಿ ಹರಿವಾಣ, ಪೇದೆ ಎಸ್ ಎಮ್ ಸುಂಕದ ಹಾಗೂ ಚಾಲಕ ದಾವಲಸಾಬ್ ಎ ಕಲಯಗಾರ ಅವರ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.