‘ನಗರದ ಅಭಿವೃದ್ಧಿಯೇ ನನ್ನ ಕನಸು’; ನಗರಸಭೆ ಅಧ್ಯಕ್ಷೆ ಉಷಾ ದಾಸರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಗದಗ-ಬೆಟಗೇರಿ ಅವಳಿ ನಗರದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಕನಸು, ಗುರಿಯಾಗಿದೆ. ವಿರೋಧ ಪಕ್ಷದವರ ಅನಗತ್ಯ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಸಿಕೊಳ್ಳದೇ, ಅವಳಿ ನಗರದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳಿದ್ದಾರೆ.

ಅವರು ಮಂಗಳವಾರ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಕಾಂಗ್ರೆಸ್‌ನ ಜನವಿರೋಧಿ, ದಬ್ಬಾಳಿಕೆ, ದುರಾಡಳಿತದಿಂದ ಬೇಸತ್ತಿದ್ದ ಅವಳಿ ನಗರದ ಜನರು ಕಳೆದ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ. ಜನರ ನಿರೀಕ್ಷೆಯಂತೆ ಅವಳಿ ನಗರದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುತ್ತಿದ್ದೇವೆ. ನಾನು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸಿಬ್ಬಂದಿಗಳ ಕೊರತೆಯ ಬಗ್ಗೆ ಪೌರಾಡಳಿತ ಇಲಾಖೆಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ.

ಕಾಂಗ್ರೆಸ್ ಆಡಳಿತದಲ್ಲಿದ್ದಾಗ ನಗರಸಭೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಈ ಹಿಂದಿದ್ದ ಮುಖಂಡರೆಲ್ಲ ಏನೆಲ್ಲಾ ಮಾಡಿದ್ದಾರೆ ಎಂಬುವುದು ಗದಗ-ಬೆಟಗೇರಿ ಅವಳಿ ನಗರದ ಜನರಿಗೆ ಚೆನ್ನಾಗಿಯೇ ಗೊತ್ತಿದೆ. ಅಷ್ಟಕ್ಕೂ ನಗರಸಭೆ ಅಧ್ಯಕ್ಷರು ಸರಿಯಿಲ್ಲದ್ದರಿಂದ ಅಧಿಕಾರಿಗಳು, ಸಿಬ್ಬಂದಿ ಮೇಲೆ ಹಿಡಿತ ಇಲ್ಲದಂತಾಗಿದೆ ಎಂಬ ವಿರೋಧ ಪಕ್ಷದ ನಾಯಕರ ಆರೋಪ ಅಸಂಬದ್ಧವಾಗಿದೆ. ಮನೆಯ ಯಜಮಾನನೆಂದರೆ ಮನೆಯ ಇತರ ಕುಟುಂಬ ಸದಸ್ಯರೊಂದಿಗೆ( ಅಧಿಕಾರಿ, ಸಿಬ್ಬಂದಿಗಳು) ಗೌರವಯುತವಾಗಿ ವರ್ತಿಸಬೇಕು, ನಡೆದುಕೊಳ್ಳಬೇಕು. ಪ್ರತಿಯೊಬ್ಬರೊಂದಿಗೂ ಸಮನ್ವಯ ಸಾಧಿಸಿ ಮನೆಯ ಪರಿಸರ(ಆಡಳಿತ ವ್ಯವಸ್ಥೆ) ಹಾಳಾಗದಂತೆ ನಿಗಾವಹಿಸಿ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಮನೆಯ ಯಜಮಾನನ ಜವಾಬ್ದಾರಿಯಾಗಿದ್ದು, ಆಡಳಿತ ಪಕ್ಷ ಈ ನೀತಿಯನ್ನು ಅಚ್ಚುಕಟ್ಟಾಗಿ ಅನುಸರಿಸುತ್ತಿದೆ.

ಅಧಿಕಾರಿ, ಸಿಬ್ಬಂದಿಗಳನ್ನು ಹೆದರಿಸಿ, ಬೆದರಿಸಿ ಹಿಡಿತದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿಸುವುದು ನಮ್ಮ ಸಂಸ್ಕೃತಿ ಅಲ್ಲ. ಅದೇನಿದ್ದರೂ ಕಾಂಗ್ರೆಸ್ಸಿಗರ ಸಂಸ್ಕೃತಿ ಎಂದು ಕಿಡಿ ಕಾರಿದ್ದಾರೆ.

ಸುಮಾರು ೧೪೯ ವರ್ಷಗಳ ಇತಿಹಾಸ ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿ, ರಸ್ತೆ, ಚರಂಡಿ ಹೀಗೆ ಅನೇಕ ವರ್ಷಗಳಿಂದ ಸಾಕಷ್ಟು ಜಟಿಲ ಸಮಸ್ಯೆಗಳು ಜೀವಂತವಾಗಿ ಉಳಿದಿವೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆ-೪ನೇ ಹಂತದಲ್ಲಿ ಪ್ರತಿ ವಾರ್ಡಿಗೂ ೫೦ ಲಕ್ಷ ರೂ. ಅನುದಾನ ಹಂಚಿಕೆ ಮಾಡಿದ್ದೇವೆ. ನಗರೋತ್ಥಾನ ಯೋಜನೆಯ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಅಧಿಕಾರಿಗಳು ತ್ವರಿತವಾಗಿ ಸಿದ್ಧಪಡಿಸುತ್ತಿದ್ದಾರೆ.

ಎಸ್ಎಫ್ ಸಿ, ೧೫ನೇ ಹಣಕಾಸು ಯೋಜನೆಯಡಿ ಪ್ರತಿ ವಾರ್ಡಿಗೂ ೧೦ ರಿಂದ ೧೫ ಲಕ್ಷ ರೂ. ಅನುದಾನ ಹಂಚಿಕೆ ಮಾಡಿದ್ದೇವೆ. ಅದರಂತೆ, ನಗರಸಭೆ ಅನುದಾನ(ಜನರಲ್ ಫಂಡ್)ದಲ್ಲಿ ಪ್ರತಿ ವಾರ್ಡಿಗೂ ೧೫ ಲಕ್ಷ ರೂ. ಹಂಚಿಕೆ ಮಾಡಿರುವುದನ್ನು ಕಾಂಗ್ರೆಸ್ ಸದಸ್ಯರು ಮರೆತಂತಿದೆ. ಅಲ್ಲದೇ, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದಕ್ಕಿಂತ ಮೊದಲು ಅದರದ್ದೇ ಆದ ಟೆಂಡರ್ ಪ್ರಕ್ರಿಯೆಗಳಿದ್ದು, ಅವುಗಳನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಹೀಗೆ ಆಧಾರ ರಹಿತವಾಗಿ ಆರೋಪಿಸುವುದಕ್ಕಿಂತ ಮೊದಲು ವಿರೋಧ ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.

ದಲಿತ ಮಹಿಳೆಯೊಬ್ಬಳು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಅಚ್ಚುಕಟ್ಟಾದ ಆಡಳಿತ ನೀಡುತ್ತಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲವೆಂಬ ಕುಂಟು ನೆಪದೊಂದಿಗೆ ಕಾಂಗ್ರೆಸ್ ದಲಿತ, ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ಅಧಿಕಾರದ ದಾಹದಿಂದಾಗಿ ಪದೇ ಪದೇ ಈ ರೀತಿಯಾಗಿ ತಳ ಬುಡವಿಲ್ಲದ ಸುಳ್ಳು ಆರೋಪಗಳನ್ನು ಆಡಳಿತ ಪಕ್ಷದ ಮೇಲೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರ ಆರೋಪಕ್ಕೆ ಅವಳಿ ನಗರದ ಪ್ರಜ್ಞಾವಂತ ಜನರು ಮನ್ನಣೆ ನೀಡುವುದಿಲ್ಲವೆಂಬ ವಿಶ್ವಾಸ ನನಗಿದೆ. ಏಕೆಂದರೆ, ನಿಮ್ಮ ಬೂಟಾಟಿಕೆಯನ್ನು ಸಾಕಷ್ಟು ವರ್ಷಗಳಿಂದ ಕಣ್ಣಾರೆ ಕಂಡಿದ್ದಾರೆ.

-ಉಷಾ ದಾಸರ, ಅಧ್ಯಕ್ಷರು, ಗದಗ-ಬೆಟಗೇರಿ ನಗರಸಭೆ

Spread the love

LEAVE A REPLY

Please enter your comment!
Please enter your name here