ಬಸವಣ್ಣನ ಮೂರ್ತಿ ಕಿತ್ತು ಹಾಕಿ ದುಷ್ಕೃತ್ಯ….
ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ
ಲಕ್ಕುಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಟೆಲ್ ಹಾಗೂ ಮನೆಗಳ ಕಳ್ಳತನವಾಗಿರುವ ಘಟನೆಗಳು ಇನ್ನೂ ಹಸಿಯಾಗಿರುವಾಗಲೇ, ಇಲ್ಲಿಯ ದೇವಸ್ಥಾನವೊಂದರಲ್ಲಿ ನಿಧಿ ಆಸೆಗಾಗಿ ಕಳ್ಳರು ಮೂರ್ತಿಯಿರುವ ಸ್ಥಳವನ್ನು ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದಿಂದ 3 ಕೀ.ಮೀ ದೂರದಲ್ಲಿರುವ ಕದಾಂಪೂರ ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಜಮೀನೊಂದರಲ್ಲಿ ಈ ಘಟನೆ ನಡೆದಿದೆ.

ಐತಿಹಾಸಿಕ ಸೋಮೇಶ್ವರ ದೇವಾಲಯದ ಒಳಗೆ ಈಶ್ವರಲಿಂಗ ಮೂರ್ತಿಯ ಮುಂದೆ ಇದ್ದ ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿ, ಅದರ ಕೆಳಗೆ ಸುಮಾರು ಹತ್ತು ಅಡಿ ಆಳಕ್ಕೆ ಅಗೆಯಲಾಗಿದೆ.
ನೂಲು ಹುಣ್ಣಿಮೆ ದಿನ ರಾತ್ರಿ ಈ ಪ್ರಕರಣ ನಡೆದಿದ್ದು, ಅರ್ಚಕರು ಮುಂಜಾನೆ ಪೂಜೆ ನೆರವೇರಿಸಲು ತೆರಳಿದಾಗ ಕೃತ್ಯ ಗಮನಕ್ಕೆ ಬಂದಿದೆ. ನಿಧಿ ಆಸೆಗಾಗಿ ಕಳ್ಳರು ಇಂತಹ ಕೃತ್ಯವನ್ನು ಎಸಗಿರಬಹುದು ಎಂದು ದೇವಸ್ಥಾನದ ಅರ್ಚಕ ಶಿದ್ರಾಮಯ್ಯ ಮಾಯಾಕರಮಠ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಇದೇ ದೇವಸ್ಥಾನದಲ್ಲಿ ಇಂತಹ ಪ್ರಕರಣ ನಡೆದಿತ್ತು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.
ಸೋಮನಕಟ್ಟಿ ಪ್ರದೇಶವೇಂದು ಹೇಳಲಾಗುತ್ತಿರುವ ಇಲ್ಲಿ, ನೂರಾರು ವರ್ಷಗಳ ಹಿಂದೆ ಜನ ವಸತಿಯಿತ್ತು. ಇಲ್ಲಿನ ಕಲಾತ್ಮಕ ಕೆತ್ತನೆಯ ಈ ಸೋಮೇಶ್ವರ ದೇವಸ್ಥಾನವು ಅಂದಿನಿಂದಲೇ ಪೂಜೆಗೊಳ್ಳುತ್ತಿದೆ.
ಇದರ ಕೂಗಳತೆಯ ದೂರದಲ್ಲಿ ಮಾರುತಿ ದೇವಸ್ಥಾನವೂ ಇದೆ. ದೇವಸ್ಥಾನಕ್ಕೆ ರಕ್ಷಣಾ ಕವಚ ಒದಗಿಸಬೇಕೆಂದು ಸಮಾಜ ಸೇವಕ ಮರಿಯಪ್ಪ ವಡ್ಡರ ಹಾಗೂ ಸಾರ್ವಜನಿಕರ ಒತ್ತಾಯಿಸಿದ್ದಾರೆ.