ಜಪಾನ್‌ನ ದಾಖಲೆ ಅಳಿಸಿದ ಆಕಾಶ ಜೋಗರೆಡ್ಡಿ- ಶ್ರವಣಕುಮಾರ; ಕೆಎಲ್‌ಇ ವಿದ್ಯಾರ್ಥಿಗಳ ಗಿನ್ನಿಸ್ ರೆಕಾರ್ಡ್!

0
Spread the love

ಗದಗನ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಕೆಎಲ್‌ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದ ಸ್ನಾತಕೋತ್ತರ (ಇಂಗ್ಲಿಷ್) ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆಕಾಶ ಜೋಗರೆಡ್ಡಿ ಮತ್ತು ಶ್ರವಣಕುಮಾರ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

ವೀಲ್ ಸ್ಟೈಲ್ ಸ್ಕಿಪಿಂಗ್‌ನಲ್ಲಿ 2512 ಸುತ್ತುಗಳನ್ನು 40 ನಿಮಿಷದಲ್ಲಿ ಪೂರ್ಣಗೊಳಿಸಿದ ಅವರು ಈ ಮೂಲಕ ಜಪಾನ್ ದೇಶದ ಯು-ವಕಮಾಟೋ ಮತ್ತು ನರಿಹಿಷಾ ತಗುಚಿ ಅವರ ಹೆಸರಿನಲ್ಲಿದ್ದ 1559 ಸುತ್ತುಗಳ ದಾಖಲೆಯನ್ನು ಅಳಿಸಿದ್ದಾರೆ.

ಕೆಎಲ್‌ಇ ಆಡಳಿತ ಮಂಡಳಿ ಸದಸ್ಯರಾದ ಶಂಕ್ರಣ್ಣ ಮುನವಳ್ಳಿ ವಿದ್ಯಾರ್ಥಿಗಳ ಸಾಧನೆ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಬಾಗಲಕೋಟೆಯ ವಿಜಯಕುಮಾರ ಹಾಗೂ ಗದಗ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಸಿ ಶಾಲೆಯ ಶ್ರೀನಿವಾಸ ಗುಳಗುಂಡಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಮಯ ಪಾಲಕರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ ಚಿಕ್ಕನ್ನವರ ಹಾಗೂ ಸಚ್ಚಿದಾನಂದ ಹೆಗಡೆ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರಾದ ಆಕಾಶ ಜೋಗರಡ್ಡಿ 6ನೇ ತರಗತಿಯಿಂದ ಸ್ಕಿಪ್ಪಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ನೇಪಾಳದ ಕಠ್ಮಂಡುವಿನಲ್ಲಿ ಜರುಗಿದ ದಕ್ಷಿಣ ಏಷ್ಯಾ ವಲಯದ ಸ್ಪರ್ಧೆಯಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದಿದ್ದಾರೆ. ಕಾಲೇಜು ಹಂತದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆಂಧ್ರ ಪ್ರದೇಶ ಮತ್ತು ಓಡಿಸ್ಸಾ ರಾಜ್ಯಗಳಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ.

ಗಿನ್ನಿಸ್ ದಾಖಲೆ ಹೊರತುಪಡಿಸಿ ಸ್ಕಿಪಿಂಗ್‌ನಲ್ಲಿ ಒಟ್ಟು 9 ದಾಖಲೆಗಳನ್ನು ನಿರ್ಮಿಸಿದ್ದಾರೆ ಎಂದರು.

ಕೊಪ್ಪಳ ತಾಲೂಕಿನ ಕುಕನೂರ ಪಟ್ಟಣದ ಶ್ರವಣಕುಮಾರ ಆಂಧ್ರ ಪ್ರದೇಶ, ರಾಜಸ್ಥಾನ ಮತ್ತು ಓಡಿಸ್ಸಾ ರಾಜ್ಯಗಳಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಪಿಯುಸಿ ಹಂತದಿಂದ ಸ್ಕಿಪ್ಪಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಈ ಸಾಧನೆ ಗಮನಿಸಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ವಿದ್ಯಾರ್ಥಿಗಳ ಪ್ರವೇಶ ಶುಲ್ಕದಲ್ಲಿ ಶೇ. 50 ರಷ್ಟು ವಿನಾಯಿತಿ ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಕೆಎಲ್‌ಇ ಸಂಸ್ಥೆ ಪ್ರತಿಭಾವಂತರಿಗೆ ಸಾಕಷ್ಟು ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಈ ಕ್ರೀಡಾ ಸಾಧಕರು ಶೈಕ್ಷಣಿಕವಾಗಿಯೂ ಉನ್ನತ ಸಾಧನೆ ಮಾಡಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಜೆ.ಟಿ.ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ, ಈಶಣ್ಣ ಮುನವಳ್ಳಿ, ಅಶೋಕ ನೀಲುಗಲ್, ತೊಂಟೇಶ ಮಾನ್ವಿ, ವೀರೇಶ ಕೂಗು, ಪ್ರಾ. ಪಿ.ಜಿ. ಪಾಟೀಲ, ಗಿನ್ನಿಸ್ ದಾಖಲೆ ಬರೆದ ಆಕಾಶ ಜೋಗರೆಡ್ಡಿ ಮತ್ತು ಶ್ರವಣಕುಮಾರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here