ಚಾಕು ಇರಿತ ಪ್ರಕರಣದ ಅಸಲಿ ಕಹಾನಿ.…
ವಿಜಯಸಾಕ್ಷಿ ಸುದ್ದಿ, ಗದಗ
ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯ ನಿಶ್ಚಿತಾರ್ಥ ಆಗಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಯುವತಿಯ ಮನೆಗೆ ನುಗ್ಗಿ ಮನೆ ಮಂದಿಗೆ ಜೀವ ಬೆದರಿಕೆ ಹಾಕಿ, ತಾನೇ ತಂದಿದ್ದ ಚಾಕುವಿನಿಂದ ಹೆದರಿಸಲು ಹೋಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗದಗ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಹುಡ್ಕೋ ಕಾಲೋನಿಯ ನೀಲಮ್ಮತಾಯಿ ಮಠದ ಹತ್ತಿರದ ಮನೆಯೊಂದಕ್ಕೆ ನುಗ್ಗಿದ ಆರೋಪಿ ಕಮ್ಮಾರ ಓಣಿಯ ಅಭಿಷೇಕ ಅಲಿಯಾಸ್ ಅಭಿ ಹನಮಂತಪ್ಪ ನಾಯ್ಕರ್ ಎಂಬಾತ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯ ಮನೆಗೆ ನುಗ್ಗಿ ಮನೆಯಲ್ಲಿದ್ದ ಸಾಮಾನುಗಳನ್ನು ಒದ್ದು ಅವಾಚ್ಯವಾಗಿ ಬೈದಾಡುತ್ತಿದ್ದಾಗ ಮನೆಯಲ್ಲಿ ಇದ್ದ ಜನರು ಯಾಕೆ ಬೈಯಿತೀದಿ ಅಂದಾಗ ಮನೆಯಿಂದ ಹೊರಗೆ ಹೋದವನೇ ಜೋರಾಗಿ ನಿಮ್ಮ ಹುಡುಗಿಯನ್ನು ನಾನು ಪ್ರೀತಿ ಮಾಡ್ತೀನಿ, ಬೇರೆದವರ ಜೊತೆಗೆ ನಿಶ್ಚಿತಾರ್ಥ ಮಾಡೀರಿ ಅಂತ ಅವಾಚ್ಯವಾಗಿ ಬೈದಾಡುತ್ತಾ ಇದ್ದಾಗ ಹುಡುಗಿಯ ತಾಯಿ ಯಾಕೆ ಬೈದಾಡ್ತೀ ಅಂತ ಕೇಳಿದಾಗ ಅವರ ಮೇಲೆ ಹಲ್ಲೆ ಮಾಡಿ, ಅವಮಾನ ಮಾಡಿದ್ದಾನೆ.
ಜಗಳ ಬಿಡಿಸಲು ಹೋದ ಪ್ರಮೋದ್ ಹಾಗೂ ವಿನೋದ್ ಸಹೋದರರ ಮೇಲೆ ಆರೋಪಿ ಅಭಿಷೇಕ ತಾನು ತಂದಿದ್ದ ಚಾಕು ಬೀಸಿದಾಗ ತನ್ನ ಎಡಗೈಗೆ ಗಾಯ ಮಾಡಿಕೊಂಡಿದ್ದಾನೆ.
ಆಗ ವಿನೋದ್ ಹಾಗೂ ಪ್ರಮೋದ್ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಅಭಿಷೇಕ ತನ್ನ ಎದೆ ಭಾಗಕ್ಕೆ ಹಾಗೂ ರಟ್ಟೆಗೆ ಗಾಯಮಾಡಿಕೊಂಡಿದ್ದಾನೆ. ನಿಮ್ಮ ಹುಡುಗಿಯನ್ನು ಯಾವುದೇ ಕಾರಣಕ್ಕೂ ನನ್ನ ಬಿಟ್ಟು ಬೇರೆದವರಿಗೆ ಮದುವೆ ಮಾಡಿಕೊಡಬೇಡಿ, ಒಂದು ವೇಳೆ ನೀವು ಬೇರೆದವರಿಗೆ ಮದುವೆ ಮಾಡಿಕೊಟ್ರೆ ನಿಮ್ಮನ್ನು ಜೀವ ಸಹಿತ ಬಿಡಂಗಿಲ್ಲ ಅಂತ ಬೆದರಿಕೆ ಹಾಕಿದ್ದಾನೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 148/2022 ಅಭಿಷೇಕ ನಾಯ್ಕರ್ ಮೇಲೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.