ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪತಿ ಹಾಗೂ ಅತ್ತೆ, ಮಾವನ ಕಿರುಕುಳಕ್ಕೆ ಮನನೊಂದು ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಜರುಗಿದೆ. ಸುನೀತಾ ಪ್ರಮೋದ ಕಮ್ಮಾರ(30) ಎಂಬ ಗೃಹಿಣಿಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಧಾರವಾಡದ ಭಾರತಿ ಬಸವರಾಜ ಪತ್ತಾರ ಎಂಬುವವರ ಮಗಳಾದ ಸುನಿತಾಳನ್ನು ಶಿಗ್ಲಿಯ ಪ್ರಮೋದ ನಿಂಬಣ್ಣ ಕಮ್ಮಾರ ಎಂಬ ಕೆಪಿಟಿಸಿಎಲ್ ಉದ್ಯೋಗಿಗೆ ೨೦೦೮ ರಲ್ಲಿಯೇ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮದುವೆಯ ಕೆಲ ವರ್ಷಗಳ ನಂತರ ಗಂಡ ಪ್ರಮೋದ, ಅತ್ತೆ ಶಕುಂತಲಾ, ಮಾವ ನಿಂಬಣ್ಣ ಕಮ್ಮಾರ ಅವರು ನಿತ್ಯ ಅವಳೊಂದಿಗೆ ವಿನಾಕಾರಣ ಜಗಳ ತೆಗೆಯುವುದು, ನೀನು ನಮ್ಮ ಮನೆಗೆ ಲಾಯಕ್ಕಿಲ್ಲ, ಏನಾದರೂ ಮಾಡಿಕೊಂಡು ಸಾಯಿ. ನಾವು ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಆಕೆಗೆ ನಿತ್ಯ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಗೃಹಿಣಿ ಆ.1 ರ ಸೋಮವಾರ ಸಂಜೆ ಮನೆಯ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅವರ ಸಾವಿಗೆ ಗಂಡ, ಅತ್ತೆ ಮಾವನೇ ನೇರ ಕಾರಣ ಎಂದು ಮೃತಳ ತಾಯಿ ಭಾರತಿ ಪತ್ತಾರ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ನಂತರ ಪ್ರಕರಣವನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಮಂಗಳವಾರ ಇಡೀ ದಿನ ಹೈಡ್ರಾಮಾ ನಡೆಯಿತು. ಆದರೆ ಮೃತಳ ಸಹೋದರ ಸೈನಿಕನಾಗಿದ್ದು ಅವರ ದಿಟ್ಟ ನಿಲುವಿನಿಂದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮೂರು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.