ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್ ಪಾಟೀಲ್……..
ವಿಜಯಸಾಕ್ಷಿ ಸುದ್ದಿ, ಗದಗ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರತಿ ಬಾರಿಯೂ ರೋಣ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಜಿ.ಎಸ್ ಪಾಟೀಲರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರ ಇಲ್ಲದ ಸಮಯದಲ್ಲಿಯೂ ಧೃತಿಗೆಡದೇ ಪಕ್ಷದ ಬಲವರ್ಧನೆಯಲ್ಲಿ ಶ್ರಮಿಸಿದ್ದಾರೆ. ಹೀಗಿರುವಾಗ, ರೋಣ ಕ್ಷೇತ್ರದ ಶಾಸಕರಿಗೆ ಈ ಬಾರಿಯೂ ಸಚಿವ ಸ್ಥಾನದ ಅವಕಾಶ ಕೈತಪ್ಪಿದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಐಸಿಸಿ, ಕೆಪಿಸಿಸಿ ವರಿಷ್ಠರಿಗೆ ರೋಣ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದರು.
ಭಾನುವಾರ ನಗರದ ಜಿ.ಎಸ್. ಪಾಟೀಲರ ನಿವಾಸದಲ್ಲಿ ಸಭೆ ಸೇರಿದ್ದ ಪಕ್ಷದ ಮುಖಂಡರು, ವೀರಶೈವ ಲಿಂಗಾಯತ, ಕುರುಬ ಸಮಾಜದ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು, ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು. ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾದ ಪ್ರತೀ ಚುನಾವಣೆಯ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಆದರೆ, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿಲ್ಲ.
ಹೀಗಿದ್ದರೂ ನಾಲ್ಕು ದಶಕಗಳಿಂದ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿಲ್ಲ. ಒಂದು ವೇಳೆ ಜಿ.ಎಸ್ ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ಲೋಕಸಭೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ರೋಣ ಮತಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಕಟು ಎಚ್ಚರಿಕೆ ನೀಡಿದರು.
ಶಾಸಕ ಜಿ.ಎಸ್. ಪಾಟೀಲರಿಗೆ ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ, ರೋಣ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು. ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಶೀಘ್ರವೇ ಸ್ಪಂದಿಸದಿದ್ದರೆ, ನಾಳೆ, ಮೇ.೨೩ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯ ಎದುರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ರೋಣ ಕ್ಷೇತ್ರದಿಂದ ಬೆಂಬಲಿಗರು, ಕಾರ್ಯಕರ್ತರು ಬೆಂಗಳೂರಿಗೆ ತೆರಳಲು ಸಭೆಯಲ್ಲಿ ನಿರ್ಧಾರ ಕೈಗೊಂಡರು.