ವಿ.ಡಿ.ಎಸ್.ಟಿ.ಸಿ ಮೈದಾನದಲ್ಲಿ ಘಟನೆ….. ವಿಷ ಸೇವಿಸಿದ ಉದ್ಯಮಿ….ಜಮೀನಿನ ಹಣ ಕೇಳಲು ಹೋದಾಗ ಜೀವ ಬೆದರಿಕೆ… ಹಲ್ಲೆ ಆರೋಪ…..ಆರೋಪ ನಿರಾಕರಿಸಿದ ನಗರಸಭೆ ಸದಸ್ಯ….
ವಿಜಯಸಾಕ್ಷಿ ಸುದ್ದಿ, ಗದಗ
ಜಮೀನು ಬರೆದುಕೊಟ್ಟಿದ್ದಕ್ಕೆ ಕೊಡಬೇಕಾಗಿದ್ದ 8,50,000ರೂ.ಗಳನ್ನು ಕೇಳಲು ಹೋದಾಗ ಆರೋಪಿ ಗೂಳಪ್ಪ ಮುಶಿಗೇರಿ ಹಾಗೂ ನಾಲ್ವರು ಸೇರಿ ಗದಗನ ವಿ.ಡಿ.ಎಸ್. ಟಿ.ಸಿ ಮೈದಾನದಲ್ಲಿ ಹೊಡೆದು, ಅವಾಚ್ಯವಾಗಿ ಬೈದಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಇರಾನಿಯ ಕಾಲೋನಿಯ ಮಲ್ಲಯ್ಯ ರುದ್ರಯ್ಯ ಹಿರೇಮಠ ಎಂಬುವರು ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ1860 (u/s-143,147,323,341,504,506,149) 003/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಫಿರ್ಯಾದಿ ಮಲ್ಲಯ್ಯ ಎಂಬುವರು ಕಳೆದ ಎರಡು ವರ್ಷಗಳ ಹಿಂದೆ ಚಂದ್ರಪ್ಪ ಹುಬ್ಬಳ್ಳಿ ಎಂಬುವರ ಕಡೆಯಿಂದ ಚುರ್ಚಿಹಾಳದಲ್ಲಿರುವ 3 ಎಕರೆ07 ಗುಂಟೆ ಜಮೀನನ್ನು 16,00,000,=00ರೂ.ಗಳಿಗೆ ಖರೀದಿ ಮಾಡಿದ್ದು, ಆ ವೇಳೆ 3,50,000=00ರೂ.ಗಳನ್ನು ಕೊಟ್ಟು ಉಳಿದ 12,50,000=00 ಗಳನ್ನು ಒಂದು ವರ್ಷದಲ್ಲಿ ಕೊಡುತ್ತೇನೆ ಅಂತ ಒಪ್ಪಂದ ಮಾಡಿಕೊಂಡು, ಭದ್ರತೆಗಾಗಿ ಎರಡು ಖಾಲಿ ಚೆಕ್ ಹಾಗೂ ಬಾಂಡ್ ಕೊಟ್ಟಿದ್ದು, ಅವಧಿ ಮುಗಿದರೂ ಹಣ ಕೊಡಲು ಆಗಲಿಲ್ಲ.

ಆಗ ಮತ್ತೆ ಚಂದ್ರಪ್ಪ ಹುಬ್ಬಳ್ಳಿ ಇವರು ಮೂರು ತಿಂಗಳ ಕಾಲಾವಕಾಶ ಕೊಟ್ಟಿದ್ದರು. ನಂತರ ದಿ.23-06-2022 ರಂದು ಮುಂಜಾನೆ 11ಗಂಟೆಗೆ ಎರಡನೇ ಆರೋಪಿ ಆಗಿರುವ ಲೋಹಿತ್ ಚಲವಾದಿ ಎಂಬಾತ ಸಿದ್ದಾರ್ಥ ನಗರದಲ್ಲಿ ಫಿರ್ಯಾದಿ ಮಲ್ಲಯ್ಯನಿಗೆ ಅಡ್ಡಗಟ್ಟಿ ಹೆದರಿಸಿ, ಗೂಳಪ್ಪ ಮುಶಿಗೇರಿ ಅವರ ಆಫೀಸಗೆ ಕರೆದುಕೊಂಡು ಬಂದು, ಚಂದ್ರಪ್ಪ ಹುಬ್ಬಳ್ಳಿ ಕಡೆಯಿಂದ ಖರೀದಿ ಮಾಡಿದ ಜಮೀನನ್ನು ನನ್ನ ಹೆಸರಿಗೆ ಬರೆದುಕೊಡು. ನಾನು 12,50,000=00 ರೂ. ಗಳನ್ನು ಬಿಟ್ಟು ಉಳಿದ 8,50,000=00ರೂ.ಗಳನ್ನು ಕೊಡುತ್ತೇನೆ ಎಂದು ಹೇಳಿ, ಇದಕ್ಕೆ ನೀನು ಒಪ್ಪದಿದ್ದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಅಲ್ಲಿಯೇ ಇದ್ದ ಗುರುರಾಜ್ ತಿಳ್ಳಿಹಾಳ, ಕೊಟೇಶ್ ಬಗಲಿ ಹಾಗೂ ಶಿವರಾಜ್ ಶಿವಪುರ ಎಂಬುವರು ಹೆದರಿಸಿದ್ದು, ಹೆದರಿದ ಮಲ್ಲಯ್ಯ ಅಂದೇ ಮುಂಡರಗಿಗೆ ಹೋಗಿ ಜಮೀನನ್ನು ಗೂಳಪ್ಪ ಮುಶಿಗೇರಿ ಎಂಬುವರ ಹೆಸರಿಗೆ ಮಾಡಿಕೊಡಲಾಗಿದೆ.
ಹೀಗಾಗಿ ಗೂಳಪ್ಪ ಮುಶಿಗೇರಿ ಅವರು ಕೊಟ್ಟ ಮಾತಿನಂತೆ ಉಳಿದ 8,50,000=00ರೂ. ಗಳನ್ನು ಕೇಳಲು ಹೋದಾಗ ಮತ್ತೆ ಆರೋಪಿತರೆಲ್ಲರೂ ಸೇರಿ ವಿ.ಡಿ.ಎಸ್. ಟಿ.ಸಿ ಮೈದಾನದಲ್ಲಿ ಹೊಡೆದು, ಅವಾಚ್ಯವಾಗಿ ಬೈದಾಡಿ ಜೀವ ಬೆದರಿಕೆ ಹಾಕಿದ್ದಾರೆ.

ದಿ.16-01-2023 ರಂದು ಮಲ್ಲಯ್ಯ ಹಿರೇಮಠ ಆರೋಪಿತರ ಜೊತೆಗೆ ಹಿರಿಯರ ಸಮಕ್ಷಮ ವ್ಯವಹಾರ ಸರಿ ಮಾಡಿಕೊಂಡರಾಯಿತು ಎಂದು ಹೋಗಿ ಕೇಳಿದಾಗ, ಆರೋಪಿತರು 200000=00ರೂ.ಗಳನ್ನು ಕೊಡುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಬೇಜಾರ ಆದ ಮಲ್ಲಯ್ಯ ಹಿರೇಮಠ ಬೇರೆ ಹಣಕಾಸಿನ ವ್ಯವಹಾರ ಇರುವುದರಿಂದ ಆರೋಪಿತರು ಹಣ ಕೊಟ್ಟಿದ್ದರೇ ಉಳಿದ ವ್ಯವಹಾರ ಸರಿ ಆಗುತ್ತಿತ್ತು ಅಂತ ಬೇಜಾರ ಮಾಡಿಕೊಂಡು ವಿ.ಡಿ.ಎಸ್. ಟಿ.ಸಿ ಮೈದಾನದಲ್ಲಿ ವಿಷ ಸೇವಿಸಿದ್ದಾನೆ. ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದಾನೆ.
ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾನೂನು ಪ್ರಕಾರ ಖರೀದಿ ಮಾಡಲಾಗಿದೆ
ಈ ಕುರಿತು ನಗರಸಭೆ ಸದಸ್ಯ ಗೂಳಪ್ಪ ಮುಶಿಗೇರಿ ಎಂಬವರು ಪ್ರತಿಕ್ರಿಯೆ ನೀಡಿದ್ದು, ಎಲ್ಲವೂ ಕಾನೂನು ಪ್ರಕಾರ ನಡೆದುಕೊಳ್ಳಲಾಗಿದೆ. ಖರೀದಿ ಮಾಡಿದ ಬಗ್ಗೆ ನಮ್ಮಲ್ಲಿ ಕಾಗದ ಪತ್ರಗಳಿವೆ. ಹಿರಿಯರ ಸಮ್ಮುಖದಲ್ಲಿ ಮಾತಾಡಿ ಸರಿ ಮಾಡಿಕೊಳ್ಳಲು ಅವಕಾಶ ಇದೆ ಎಂದರು.