ವಿಜಯಸಾಕ್ಷಿ ಸುದ್ದಿ, ನರಗುಂದ:
ರಾಷ್ಟ್ರೀಯ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮಕ್ಕೆ ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ಗುರುವಾರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ, ‘ಪಲ್ಸ್ ಪೋಲಿಯೊ ಮಾದರಿಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಇದರಿಂದ ಜಾನುವಾರಗಳಲ್ಲಿ ಕಾಣಿಸಿಕೊಳ್ಳಬಹುದಾದ ಕಾಲುಬಾಯಿ ರೋಗವನ್ನು ದೂರ ಮಾಡುವುದರೊಂದಿಗೆ ಆರೋಗ್ಯಯುತ ಜಾನುವಾರುಗಳನ್ನು ಹೊಂದಬೇಕು ಎಂದರು.
ಒಂದು ತಿಂಗಳವರೆಗೆ ನಡೆಯುವ ಲಸಿಕಾ ಕಾರ್ಯಕ್ರಮದಲ್ಲಿ ಪಶು ಆಸ್ಪತ್ರೆ ಸಿಬ್ಬಂದಿಗಳು ಚಿಕ್ಕನರಗುಂದ, ಬೆನಕನಕೊಪ್ಪ, ಸಂಕದಾಳ, ಅರಿಷಿನಗೋಡಿ, ಕುರುಗೋವಿನಕೊಪ್ಪ, ಹಿರೇಕೊಪ್ಪ ಗ್ರಾಮದ ರೈತರ ಮನೆ ಬಾಗಿಲಿಗೆ ಬಂದು ರಾಸುಗಳಿಗೆ ಲಸಿಕೆ ಹಾಕಲಿದ್ದಾರೆ. ಹೀಗಾಗಿ ಎಲ್ಲ ಗ್ರಾಮದ ರೈತರು ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಪರೀಕ್ಷಕ ವೈ.ಎಸ್.ಚಂದ್ರಗಿರಿ, ಶಾಂತಪ್ಪ ತಿಪ್ಪನ್ನವರ ಸೇರಿದಂತೆ ಅನೇಕರು ಇದ್ದರು.