ಶಿಕ್ಷಕಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: ನಗರಸಭೆ ಬಿಜೆಪಿ ಸದಸ್ಯೆ ಸೇರಿ ನಾಲ್ವರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು

Advertisement

ಐದು ತಿಂಗಳ ಹಿಂದೆ ನಂಜನಗೂಡಿನಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಂಜನಗೂಡು ನಗರಸಭೆಯ ಬಿಜೆಪಿ ಸದಸ್ಯೆ ಗಾಯಿತ್ರಿ ಮುರುಗೇಶ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಮಾರ್ಚ್ 9ರಂದು ನಂಜನಗೂಡಿನ ಮೊರಾರ್ಜಿ ದೇಸಾಯಿ ಶಾಲೆಯ ಹಿಂದಿ ಶಿಕ್ಷಕಿ ಸುಲೋಚನಾ(45 ವರ್ಷ) ಮಹದೇಶ್ವರ ಬಡಾವಣೆಯ ಬಾಡಿಗೆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದರು. ಏಳು ವರ್ಷಗಳ ಹಿಂದೆ ಪತಿ ಡಿ.ಕೆ.ಸುರೇಶ್ರನ್ನು ಕಳೆದುಕೊಂಡಿದ್ದ ಸುಲೋಚನಾ ಇಬ್ಬರು ಮಕ್ಕಳನ್ನೂ ಹೊಂದಿದ್ದರು. ಮಗಳಿಗೆ ಮದುವೆಯಾಗಿದ್ದು, ಮಗ ದಯಾನಂದ ಬೆಂಗಳೂರಿನಲ್ಲಿದ್ದರು. ಹೀಗಾಗಿ ಸುಲೋಚನಾ ನಂಜನಗೂಡಿನಲ್ಲಿ ಒಬ್ಬರೇ ಇದ್ದು, ಕೆಲಸ ಮಾಡುತ್ತಿದ್ದರು.

ಇನ್ನು ಇತ್ತ, ಆರೋಪಿ ಗಾಯಿತ್ರಿ ಅವರ ಪತಿ ಮುರುಗೇಶ್ ಸ್ಥಳೀಯ ದೇವಸ್ಥಾನವೊಂದರಲ್ಲಿ `ಡಿ’ ದರ್ಜೆಯ ನೌಕರರಾಗಿದ್ದು, ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ತನ್ನ ಪತಿಯ ಜೊತೆ ಶಿಕ್ಷಕಿ ಸುಲೋಚನಾ ಸಲುಗೆಯಿಂದಿದ್ದು, ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಗಾಯಿತ್ರಿ ಬಲವಾದ ಸಂಶಯ ಹೊಂದಿದ್ದರು ಎನ್ನಲಾಗಿದೆ.

ಈ ವಿಷಯಕ್ಕಾಗಿ ಸಾಕಷ್ಟು ಬಾರಿ ಮನೆಯಲ್ಲಿ ಗಲಾಟೆಗಳೂ ನಡೆದಿದ್ದವು. ತನ್ನ ಕುಟುಂಬದ ನೆಮ್ಮದಿಗೆ ಅಡ್ಡಿಯಾಗುತ್ತಿರುವ ಕಾರಣಕ್ಕಾಗಿ ಸುಪಾರಿ ಕೊಟ್ಟು ಸುಲೋಚನಾರನ್ನು ಕೊಲೆ ಮಾಡಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು, ನಗರಸಭೆ ಸದಸ್ಯೆ ಗಾಯಿತ್ರಿ ಮುರುಗೇಶ್ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಸಂಬಂಧಿಕರಾದ ಭಾಗ್ಯ, ನಾಗಮ್ಮ ಮತ್ತು ಕುಮಾರ್ ಎಂಬ ಮೂವರು ಸಂಬಂಧಿಕರನ್ನೂ ಮೈಸೂರು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here