ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣ ಬಿಡುಗಡೆ ಮಾಡಿದ್ದನ್ನು ಸ್ಮರಿಸಬೇಕು
ವಿಜಯಸಾಕ್ಷಿ ಸುದ್ದಿ, ನವಲಗುಂದ
ಅಣ್ಣಿಗೇರಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ರೂ.54 ಕೋಟಿ ವೆಚ್ಚದಲ್ಲಿ ಬಸಾಪೂರ ಗ್ರಾಮದ ಬಳಿ ನಿರ್ಮಾಣವಾಗಿರುವ ಬೃಹತ್ ಕೆರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಣ ಬಿಡುಗಡೆ ಮಾಡಿದ್ದನ್ನು ಸ್ಮರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಅಣ್ಣಿಗೇರಿ ಜನತೆ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. 8 ರಿಂದ 10 ದಿನಕ್ಕೊಮ್ಮೆ ಮಲಪ್ರಭಾ ಕಾಲುವೆಯಿಂದ ಪೈಪ್‍ಲೈನ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಜಗದೀಶ ಶೆಟ್ಟರ್ ಸರ್ಕಾರದಲ್ಲಿ ಕ್ರಿಯಾ ಯೋಜನೆ ಮಾತ್ರ ಮಂಜೂರಾಗಿತ್ತು. ಆದರೆ ಕೆರೆ ನಿರ್ಮಾಣಕ್ಕೆ ಜಮೀನು ಖರೀದಿ ಮಾಡದೇ ಯೋಜನೆ ಜಾರಿ ಮಾಡುವುದು ಕಷ್ಟಸಾಧ್ಯವಾಗಿತ್ತು. ಸರ್ಕಾರಿ ಆದೇಶದಲ್ಲಿ ಅಣ್ಣಿಗೇರಿ ಪುರಸಭೆಯವರೇ ಜಮೀನು ಖರೀದಿಸಬೇಕೆಂದು ಕರಾರು ಹಾಕಲಾಗಿತ್ತು.
ನಾನು ಶಾಸಕನಾದ ಮೇಲೆ ಜಮೀನು ಖರೀದಿ ಪ್ರಕ್ರಿಯೆ ಪ್ರಾರಂಬಿಸಿದೆ. ಅಣ್ಣಿಗೇರಿ ಪುರಸಭೆಯಿಂದ ಜಮೀನು ಖರೀದಿ ಸಾಧ್ಯವಾಗಲಿಲ್ಲ. ಪುರಸಭೆಗೆ ಹೊರೆಯಾಗಬಾರದು, ಯೋಜನೆ ಕುಂಟಿತಗೊಳ್ಳಬಾರದೆಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಮನವೊಲಿಸಿದ ಫಲವಾಗಿ ಜಮೀನು ಖರೀದಿಗೆ ಬೇಕಾಗುವಷ್ಟು ಹಣವನ್ನು ಸರ್ಕಾರದಿಂದಲೇ ಬಿಡುಗಡೆ ಮಾಡಿದರು. ನಂತರ ಬಸಾಪೂರ ರೈತರ ಮನೆ ಮನೆಗೆ ತೆರಳಿ ಮನವೊಲಿಸಿ 76 ಎಕರೆ ಜಮೀನು ಖರೀದಿಸಲಾಯಿತು. ಹಣ ಬಿಡುಗಡೆ ಮಾಡಿದ ಸಿದ್ರಾಮಯ್ಯನವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದಿದ್ದಾರೆ.
ಪರಿಷ್ಕೃತ ಕ್ರಿಯಾ ಯೋಜನೆಗೆ ಸಿದ್ದರಾಮಯ್ಯನವರೇ ಹಣ ಬಡುಗಡೆ
ಮೊದಲಿನ ಕ್ರಿಯಾ ಯೋಜನೆಯಲ್ಲಿ ಮಲಪ್ರಭಾ ಕಾಲುವೆಯಿಂದ ಪಂಪ್ ಮಾಡುವ ಮೂಲಕ ಕೆರೆಗೆ ನೀರು ಸಂಗ್ರಹ ಮಾಡುವುದು ನಂತರ ಕೆರೆಯಿಂದ ಮತ್ತೇ ಪಂಪ್ ಮಾಡಿ ಅಣ್ಣಿಗೇರಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದಾಗಿತ್ತು. ಆದರೆ ನಾನು ಈ ವಿಧಾನವನ್ನು ಬದಲಾವಣೆ ಮಾಡಿ ಮಲಪ್ರಭಾ ಕಾಲುವೆಯಿಂದ ಪಂಪ್ ಮಾಡುವ ಬದಲಾಗಿ ನಿಸರ್ಗದತ್ತವಾಗಿ (ಕಾಲುವೆಯಿಂದ ಗೇಟ್ ಓಪನ್ ಮಾಡಿ ನೀರು ಹರಿಸುವುದು) ಸರಳವಾಗಿ ನೀರು ಹರಿದು ಜಲಸಂಗ್ರಹಗಾರಕ್ಕೆ ಬರುವಂತೆ ಮಾಡುವ ಪರಿಷ್ಕೃತ ವಿನ್ಯಾಸ ಮತ್ತು ವೇರಿಯಷನ್‍ಗೆ (ಮಾರ್ಪಾಡು) ಬೇಕಾಗುವಷ್ಟು ಹೆಚ್ಚಿನ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಹೊಸದಾಗಿ ಮಲಪ್ರಭಾ ಕಾಲುವೆಗಿಂತ ಕೆಳಮಟ್ಟದಲ್ಲಿ ಕೆರೆ ನಿರ್ಮಿಸಲು ಅಂದಿನ ಪುರಸಭೆ ಅಧ್ಯಕ್ಷರು, ಸದಸ್ಯರು ಸರ್ವಾನುಮತದ ನಿರ್ಣಯ ತೆಗೆದುಕೊಂಡ ಫಲವಾಗಿಯೇ ಇಂದು ಬೃಹತ್ ಜಲಾಗಾರ ನಿರ್ಮಾಣವಾಗಲು ಸಾಧ್ಯವಾಗಿದೆ.
ಇದಕ್ಕೆಲ್ಲ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯನವರು ಹಣ ಬಿಡುಗಡೆ ಮಾಡಿದ ಫಲ ಎಂಬುದನ್ನು ಯಾರು ಮರೆಯುವಂತಿಲ್ಲ.
ಆದರೆ ಯೋಜನೆಗೆ ಇಷ್ಟೆಲ್ಲ ಕಷ್ಟ ಪಟ್ಟಿರುವ ನಮ್ಮನ್ನೆ ಮರೆತಿರುವ ಬಿಜೆಪಿಯವರು ಎಲ್ಲವನ್ನು ನಾವೇ ಮಾಡಿದ್ದೇವೆಂದು ಸುಳ್ಳು ಪ್ರಚಾರ ಪಡೆದುಕೊಳ್ಳುತ್ತಿರುವುದನ್ನು ಜನ ಅರ್ಥಮಾಡಿಕೊಳ್ಳುತ್ತಾರೆಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಿಕರಿಸಿದ್ದಾರೆ.