ಪೆಂಡಾಲ್‍ಗಾರನಿಗೆ ಒಲಿದ ಪುರಸಭೆ ಅಧ್ಯಕ್ಷ ಪಟ್ಟ
ವಿಜಯಸಾಕ್ಷಿ ಸುದ್ದಿ, ನವಲಗುಂದ
ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮೋದಿನಸಾಬ ಶಿರೂರ ಅಧ್ಯಕ್ಷರಾಗಿ ಬಹುಮತದಿಂದ ಚುನಾಯಿತರಾದರೆ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಬಾಬಾಜಾನ ಮಕಾನದಾರ ಪರಾಭವಗೊಂಡರು.

ಪುರಸಭೆ ಅಧ್ಯಕ್ಷನಾಗಿದ್ದ ಅಪ್ಪಣ್ಣ ಹಳ್ಳದ ಅವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಇಲ್ಲಿಯ ಪುರಸಭೆ ಸಭಾಭವನದಲ್ಲಿ ಏರ್ಪಡಿಸಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್‍ನಿಂದ ಮೋದಿನಸಾಬ ಶಿರೂರ ಹಾಗೂ ಜೆ.ಡಿ.ಎಸ್ ಪಕ್ಷದಿಂದ ಬಾಬಾಜಾನ ಮಕಾನದಾರ ನಾಮಪತ್ರ ಸಲ್ಲಿಸಿದ್ದರು.
ಮೋದಿನಸಾಬ ಶಿರೂರ 15 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಬಾಬಾಜಾನ ಮಕಾನದರ ಬಿಜೆಪಿಯ ಬಾಹ್ಯ ಬೆಂಬಲ ಪಡೆದರೂ ಕೇವಲ 7 ಮತಗಳನ್ನು ಪಡೆದು ನಿರಾಶೆ ಅನುಭವಿಸಬೇಕಾಯಿತು.
ತಹಶೀಲ್ದಾರ್ ಅನೀಲ ಬಡಿಗೇರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ 7, ಜೆಡಿಎಸ್ 9, ಬಿಜೆಪಿ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರ ಬಲಾಬಾಲ ಹೊಂದಿತ್ತು. ಇತ್ತೀಚೆಗೆ ಜೆಡಿಎಸ್ ಪಕ್ಷದ ಒಬ್ಬರು ಸದಸ್ಯರು ಮೃತರಾದ ಕಾರಣ ಒಟ್ಟು 22 ಸದಸ್ಯರು ಮತ ಚಲಾಯಿಸಬೇಕಾಗಿತ್ತು.
ಆದರೆ ಇತ್ತೀಚೆಗೆ ಜೆ.ಡಿ.ಎಸ್ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಜೆ.ಡಿ.ಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಎಲ್ಲ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನನ್ನನ್ನೇ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಮಾಡುವಂತೆ ಬಾಬಾಜಾನ ಮಕಾನದಾರ ಪಟ್ಟು ಹಿಡಿದಿದ್ದರು. ಆದರೆ ಕಾಂಗ್ರೆಸ್ ಪಕ್ಷ ಮೋದಿನಸಾಬ ಶಿರೂರ ಅವರನ್ನು ಕಣಕ್ಕಿಳಿಸಿದ್ದರಿಂದ ಮುನಿಸಿಕೊಂಡ ಬಾಬಾಜಾನ ಅನಿವಾರ್ಯವಾಗಿ ಈ ಮೊದಲು ಆಯ್ಕೆಯಾಗಿದ್ದ ಜೆ.ಡಿ.ಎಸ್ ಪಕ್ಷದಿಂದಲೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಬಿಟ್ಟರು.
ಆದರೆ ರಾಷ್ಟ್ರೀಯ ಪಕ್ಷವಾಗಿದ್ದ ಬಿಜೆಪಿ 6 ಸದಸ್ಯರನ್ನು ಹೊಂದಿದ್ದರೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಮುಸ್ಲಿಂ ಅಭ್ಯರ್ಥಿಯಾಗಿದ್ದ ಬಾಬಾಜಾನ ಮಕಾನದಾರ ಅವರಿಗೆ ಬಾಹ್ಯ ಬೆಂಬಲ ವ್ಯಕ್ತಪಡಿಸುವ ಮೂಲಕ ನಾವು ಮುಸ್ಲಿಂ ವಿರೋಧಿಗಳಲ್ಲ ಎಂಬ ಹಣೆಪಟ್ಟಿಯಿಂದ ಹೊರಬಂದಿದ್ದು ಕಂಡುಬಂತು.
ಪೆಂಡಾಲಗಾರನಿಗೆ ಒಲಿದ ಅದೃಷ್ಟ
ವೃತ್ತಿಯಿಂದ ಪೆಂಡಾಲ್ ಗುತ್ತಿಗೆದಾರನಾಗಿದ್ದ ಮೋದಿನಸಾಬ ಶಿರೂರು ಎಲ್ಲ ಪಕ್ಷದವರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು, ಯಾವುದೇ ಸಭೆ ಸಮಾರಂಭಗಳಿರಲಿ ಹಂದರ, ಚಪ್ಪರ ಹಾಕಲು ಇಂತಿಷ್ಟೆ ಹಣ ಕೊಡಬೇಕೆಂದು ಕರಾರು ಹಾಕುತ್ತಿರಲಿಲ್ಲ, ಕೊಟ್ಟಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದ ಕಾರಣ ಬಹುತೇಕ ಸದಸ್ಯರ ಮನದಾಳದಲ್ಲಿ ಪೆಂಡಾಲ್ ಮೋದಿನನ್ನು ಅಧ್ಯಕ್ಷ ಮಾಡಬೇಕೆಂಬ ಇಚ್ಚಾಶಕ್ತಿಯ ಫಲವೇ ಇವತ್ತು ಅವರಿಗೆ ಅದೃಷ್ಟ ಒಲಿದು ಬಂದಿದೆ ಎಂದು ಹೇಳಬೇಕಾಗುತ್ತದೆ.
ಆದರೆ ಸದಸ್ಯರಲ್ಲಿಯೇ ಹಿರಿಯರಾಗಿದ್ದ ಫರಿದಾಬೇಗಂ ಬಬರ್ಚಿ ಎರಡು ಬಾರಿ ಚುನಾಯಿತರಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರೂ ಅದೃಷ್ಟ ಅವರ ಕೈಹಿಡಿಯಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ಬಾಬಾಜಾನ ಮಕಾನದಾರ ಕೂಡ ವತ್ತಿಯಿಂದ ಪೆಂಡಾಲ ಗುತ್ತಿಗೆದಾರನಾಗಿದ್ದರೂ ಅದೃಷ್ಟ ಮಾತ್ರ ಮೋದಿನಸಾಬನಿಗೆ ಒಲಿದು ಬಂದಿದ್ದು ಮೊದಲ ಅವಧಿಯಲ್ಲಿ ಬಾಕಿ ಉಳಿದಿರುವ ಮುಂದಿನ ಐದು ತಿಂಗಳು ಅಂದರೆ ಮೇ.3 ರ ವರೆಗೆ ಕಾರ್ಯಭಾರ ಮಾಡಲಿದ್ದಾರೆ.
ಮೋದಿನಸಾಬ ಆಯ್ಕೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಬಣ್ಣ ಎರಚುವ ಮೂಲಕ ವಿಜಯೋತ್ಸವ ಆಚರಣೆ ಮಾಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ ಮಾಡಿದ್ದರು.