ವಿಜಯಸಾಕ್ಷಿ ಸುದ್ದಿ, ನವಲಗುಂದ:
ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಮಂಜುನಾಥ ಜಾಧವ ಅವರ ರಾಜೀನಾಮೆ ಅಂಗಿಕಾರವಾಗಿದ್ದು, ಈಗ ಹೊಸದಾಗಿ ಅಧ್ಯಕ್ಷರು ಯಾರಾಗಬೇಕೆಂದು ಕಾಂಗ್ರೆಸ್‌ನ ಎ ಮತ್ತು ಬಿ ಟೀಮ್‍ಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ.
ಒಟ್ಟು 23 ಸ್ಥಾನಗಳಲ್ಲಿ ಈಗ ಕಾಂಗ್ರೆಸ್ 17, ಬಿಜೆಪಿಯ 6 ಸದಸ್ಯರಿದ್ದಾರೆ. ಈ ಹಿಂದೆ ಚುನಾವಣೆ ನಡೆದ ಸಂದರ್ಭದಲ್ಲಿ ಜೆ.ಡಿ.ಎಸ್.9, ಕಾಂಗ್ರೆಸ್ 7, ಬಿಜೆಪಿ 6 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‍ನ 9 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕಾರಣ ಈಗ ಕಾಂಗ್ರೆಸ್ ಬಲ 17 ಸ್ಥಾನಕ್ಕೇರಿದ್ದು ನಿಚ್ಚಳ ಬಹುಮತ ಹೊಂದಿದೆ.
ಈ ಹಿಂದೆ ಮಾಡಿಕೊಂಡ ಒಳ ಒಪ್ಪಂದದ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 15 ತಿಂಗಳು ಅಧಿಕಾರ ನಡೆಸಬೇಕಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ಬಿಜೆಪಿಗೆ ಕಾಂಗ್ರೆಸ್ ಕೈಕೊಟ್ಟಿದೆ.

ಇದರಿಂದಾಗಿ ಈಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸದ್ಯದಲ್ಲಿಯೇ ನಡೆಯಲಿದ್ದು ಅಧ್ಯಕ್ಷ ಗಾದೆಗೆ ಕಾಂಗ್ರೆಸ್ ಎ ಟೀಮ್ (ಮೂಲ ಕಾಂಗ್ರೆಸ್ಸಿಗರು) ಮತ್ತು ಕಾಂಗ್ರೆಸ್ ಬಿ ಟೀಮ್ (ಜೆಡಿಎಸ್ ನಿಂದ ಬಂದವರು) ನಡುವೆ ಭಾರಿ ಪೈಪೋಟಿ ಎದುರಾಗಿದೆ. ಎ ಟೀಮ್‍ನಲ್ಲಿ ಕುರುಬ ಸಮಾಜದ ಶಿವಾನಂದ ತಡಸಿ ಹಾಗೂ ಬಿ.ಟೀಮ್‍ನಲ್ಲಿ ಒಕ್ಕಲಿಗ ಸಮಾಜದ ಪ್ರಕಾಶ ಶಿಗ್ಲಿ, ಅಪ್ಪಣ್ಣ ಹಳ್ಳದ ಹಾಗೂ ಮರಾಠಾ ಸಮಾಜದ ಜೀವನ ಪವಾರ ನಡುವೆ ಭಾರಿ ಪೈಪೋಟಿ ಎದುರಾಗಿದೆ. ಈಗಾಗಲೇ ಮರಾಠಾ ಸಮಾಜದವರಾದ ಮಂಜುನಾಥ ಜಾಧವ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ.

ಸದ್ಯಕ್ಕಂತು ಎರಡು ಬಣದವರು ತಮ್ಮ ತಮ್ಮ ಬೆಂಬಲಿತ ಸದಸ್ಯರೊಂದಿಗೆ ನಾಯಕರ ಮನೆಗಳಿಗೆ ಅಲೆದಾಡುತ್ತಿದ್ದಾರೆ. ಅಂತಿಮವಾಗಿ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಒಗ್ಗೂಡಿಕೊಂಡು ಒಮ್ಮತದ ನಿರ್ಣಯ ತೆಗೆದುಕೊಂಡರೆ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ.

ಒಂದು ವೇಳೆ ಕಾಂಗ್ರೆಸ್ ನಾಯಕರಲ್ಲಿ ನಾನು ಎ ಟೀಮ್, ನೀನು ಬಿ ಟೀಮ್ ಎಂದು ಕಚ್ಚಾಟ ಮಾಡಿಕೊಂಡರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ. ಇವರಿಬ್ಬರ ನಡೆಯನ್ನು ಕಾದು ನೋಡುತ್ತಿರುವ ಬಿಜೆಪಿ ಹೊಂಚು ಹಾಕುವ ಪ್ರಯತ್ನದಲ್ಲಿದೆ. ಹೇಗಾದರೂ ಮಾಡಿ ಜೆಡಿಎಸ್‍ನಿಂದ ಬಂದ ಸದಸ್ಯರನ್ನು ಹೊರಗಿಟ್ಟು ಮೂಲ ಕಾಂಗ್ರೆಸ್ ಸದಸ್ಯರ ಜೊತೆ ಇನ್ನೊಮ್ಮೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ಮಾಡುವುದಕ್ಕೂ ಯೋಜನೆ ರೂಪಿಸಿದಂತೆ ಕಾಣುತ್ತಿದೆ ಬಿಜೆಪಿ.
ಒಟ್ಟಾರೆ ಅಧ್ಯಕ್ಷ ಗಾದೆಯ ಕೀಲಿ ಕೈ ಮಾತ್ರ ಮೂಲ ಕಾಂಗ್ರೆಸ್ಸಿರ ಬಳಿ ಇದ್ದು ಯಾರು ಅಧ್ಯಕ್ಷರಾಗಲಿದ್ದಾರೆಂಬುದನ್ನು ಕಾದು ನೋಡಬೇಕಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಅಧ್ಯಕ್ಷರಾಗಲು ಮ್ಯಾಜಿಕ್ ನಂ.13 ಪಡೆಯಬೇಕಾಗಿದೆ.