ಎಸ್ಪಿ ಬಿ.ಎಸ್. ನೇಮಗೌಡ ಶ್ಲಾಘನೆ…..
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಶಿರಹಟ್ಟಿ ಪೊಲೀಸ್ ಠಾಣೆ ಹಾಗೂ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 7 ಬೈಕ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರ ಬೆನ್ನತ್ತಿದ ಪೊಲೀಸರು, ಎಸ್‌ಪಿ ಬಿ.ಎಸ್ ನೇಮಗೌಡ ಮತ್ತು ಡಿಎಸ್‌ಪಿ ಸಂಕದ ಅವರ ಮಾರ್ಗದರ್ಶನದಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ವಿಜಯಕುಮಾರ ತಳವಾರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ, ಸೆ.೨೮ರ ಬೆಳಗಿನ ಜಾವ ಆರೋಪಿ ಗುಡದಯ್ಯ ಲಕ್ಷ್ಮಣ ಮೋಡಕೇರ(21) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕದ್ದ ಬೈಕ್‌ಗಳ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾನೆ.
ಶಿರಹಟ್ಟಿ ತಾಲೂಕಿನ ಕಡಕೋಳ, ಛಬ್ಬಿ, ಶಿರಹಟ್ಟಿಯ ಚರ್ಚ್ ಹತ್ತಿರ, ಗದಗ ತಾಲೂಕಿನ ಅಂತೂರ-ಬೆಂತೂರ, ಗಜೇಂದ್ರಗಡ, ಲಿಂಗಸೂರು, ಗುತ್ತಲದ ಹುರುಳಿಹಾಳ ಗ್ರಾಮಗಳಲ್ಲಿ ಕಳುವು ಮಾಡಿದ್ದ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾದ ಪಿಎಸ್‌ಐ ಈರಪ್ಪ ರಿತ್ತಿ, ವಿಜಯಕುಮಾರ ತಳವಾರ, ಸಿಬ್ಬಂದಿಗಳಾದ ಎಲ್.ಎಚ್ ಲಮಾಣಿ, ಆರ್.ಎಸ್ ಯರಗಟ್ಟಿ, ಎಸ್.ಸಿ ಕಪ್ಪತ್ತನವರ, ಎಂ.ವಾಯ್ ಪಿರಂಗಿ, ಕಿರಣ ಪವಾರ, ಸಿ.ಸಿ ಗುಂಡೂರಮಠ, ರಾಜೇಶ ವೀರಾಪೂರ, ಬಿ.ಜೆ ಮುಳಗುಂದ, ಹನಮಂತ ದೊಡ್ಡಮನಿ, ಆರ್.ಎಚ್ ಮುಲ್ಲಾ, ಎಸ್.ಎಚ್ ರಾಮಗೇರಿ, ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ ಬೂದಿಹಾಳ, ಸಂಜು ಕೊಡೂರ ಇವರ ಕಾರ್ಯಕ್ಕೆ ಎಸ್‌ಪಿ ಬಿ.ಎಸ್. ನೇಮಗೌಡ, ಡಿಎಸ್‌ಪಿ ಸಂಕದ ಹಾಗೂ ಸಿಪಿಐ ನಾಗರಾಜ್ ಮಾಡಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.