ವಿಜಯಸಾಕ್ಷಿ ಸುದ್ದಿ, ಗದಗ:
ರಾತ್ರಿ ಪಾಳೆಯದಲ್ಲಿ ಠಾಣೆಯ ಕಪಾಟನಲ್ಲಿದ್ದ ಸಾವಿರಾರು ರೂ.ಗಳ ಹಣ ಕದ್ದಿದ್ದ ಪ್ರಕರಣದಲ್ಲಿ ಪೊಲೀಸ್ ಪೇದೆಯನ್ನು ಕೊನೆಗೂ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಡಿ.1ರಂದು ಗದಗ ಗ್ರಾಮೀಣ ಠಾಣೆಯಲ್ಲಿ ನಡೆದಿದ್ದ ಕಳ್ಳತನ ಕೃತ್ಯ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತ್ತು. ಅಂದು ಕರ್ತವ್ಯದಲ್ಲಿದ್ದ ಪೇದೆ ಮಂಜುನಾಥ ಕರಿಗಾರ ಎಂಬಾತ ಇಸ್ಪೀಟು ಜೂಜಾಟದಲ್ಲಿ ವಶಕ್ಕೆ ಪಡೆದಿದ್ದ ಹಣವನ್ನು ಕಳ್ಳತನ ಮಾಡಿದ್ದಾನೆ ಎಂದು ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆದರೆ, ಪೇದೆ ಮಂಜುನಾಥ ಅನಾರೋಗ್ಯದ ನೆಪವೊಡ್ಡಿ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ವಾರಗಳ ಕಾಲ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ. ಅಷ್ಟೇ ಅಲ್ದೇ ಆತನಿಗೆ ಗ್ರಾಮೀಣ ಠಾಣೆಯ ಅಧಿಕಾರಿಗಳು (ಸಿಕ್ ಲೀವ್) ರಜೆ ಕೊಟ್ಟು ಕಳುಹಿಸಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಆದರೂ ಶಹರ ಠಾಣೆಯ ಪೊಲೀಸರು ಕಳ್ಳ ಪೇದೆಯನ್ನು ರಾಚೋಟೇಶ್ವರನಗರದ ಮನೆಯೊಂದರಲ್ಲಿ ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಆರೋಪಿ ಗ್ರಾಮೀಣ ಪೊಲೀಸ್ ಠಾಣೆಯ ಮಂಜುನಾಥ ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಎನ್ನಲಾಗಿದೆ . ಏನೇ ಆಗಲಿ ಸಮಾಜದಲ್ಲಿರುವ ಕಳ್ಳಕಾಕರರನ್ನು ಬಂಧಿಸಬೇಕಾದ ಪೊಲೀಸರು ತಮ್ಮ ಸಹದ್ಯೋಗಿ ಪೇದೆಯನ್ನೆ ಬಂಧಿಸಿದ್ದು ವಿಪರ್ಯಾಸ.
ಈ ಹಿಂದೆ ವಿಜಯಸಾಕ್ಷಿ ಈ ಪ್ರಕರಣದ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು.