HomeGadag News‘ಹಗಲಿನಲ್ಲಿ ವಿದ್ಯಾ ಕೇಂದ್ರ, ರಾತ್ರಿಯಲ್ಲಿ ಬಾರ್!’

‘ಹಗಲಿನಲ್ಲಿ ವಿದ್ಯಾ ಕೇಂದ್ರ, ರಾತ್ರಿಯಲ್ಲಿ ಬಾರ್!’

Spread the love

ಜಿಲ್ಲಾಧಿಕಾರಿಗಳೆದುರು ಅಳಲು ತೋಡಿಕೊಂಡ ಕಾಲೇಜಿನ ಪ್ರಾಚಾರ್ಯರು

ವಿಜಯಸಾಕ್ಷಿ ಸುದ್ದಿ, ರೋಣ

‘ನೋಡಿ ಮೇಡಂ, ಇದು ಹಗಲಿನಲ್ಲಿ ಮಾತ್ರ ವಿದ್ಯಾ ಕೇಂದ್ರ. ಸಂಜೆಯ ಕತ್ತಲು ಕವಿಯುತ್ತಿದ್ದಂತೆಯೇ ಬಾರ್ ಹಾಗೂ ರೆಸ್ಟೋರೆಂಟ್ ಆಗಿ ಪರಿವರ್ತನೆಯಾಗುತ್ತದೆ. ಈ ಅಧ್ವಾನಗಳಿಂದ ನಾವು ರೋಸಿಹೋಗಿದ್ದೇವೆ. ಈ ವಿಷಯವಾಗಿ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವ ಪ್ರಯೋಜನವಾಗುತ್ತಿಲ್ಲ’ ಎಂದು ಪಟ್ಟಣದ ಸರಕಾರಿ ಪಿಯು ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್. ಮಾನೇದರು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ರ ಬಳಿ ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿಗಳು ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಜಾಗೃತಿ ವಿಷಯವಾಗಿ ಕಾಲೇಜಿಗೆ ಧಿಡೀರ್ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜಿನ ಅವ್ಯವಸ್ಥೆಗಳ ಕುರಿತು ಪ್ರಾಚಾರ್ಯರನ್ನು ಪ್ರಶ್ನಿಸಿದಾಗ, ಪ್ರಾಚಾರ್ಯರು ಮೇಲಿನಂತೆ ಉತ್ತರಿಸುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.

ಇಲ್ಲಿ ನಾವು ಏನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ನಾವು ಬೇರೆ ಬೇರೆ ಸ್ಥಳಗಳಿಂದ ಇಲ್ಲಿ ಸೇವೆಗಾಗಿ ಬಂದಿದ್ದೇವೆ. ಆದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದೆವು. ಅವುಗಳನ್ನೂ ಒಡೆದು ಹಾಕಿ, ಕಾಲೇಜಿನ ಆವರಣ ಮತ್ತು ಕಟ್ಟಡದಲ್ಲಿ ಕುಳಿತು ಮದ್ಯ ಸೇವನೆ ಮಾಡಿ, ಹೀಗೆ ಗಬ್ಬೆಬ್ಬಿಸುತ್ತಿದ್ದಾರೆ ಎಂದರು.

ಪ್ರಾಚಾರ್ಯರ ಮಾತುಗಳಿಂದ ವಿಚಲಿತರಾದ ಜಿಲ್ಲಾಧಿಕಾರಿಗಳು, ಪೊಲೀಸರಿಗೆ ತಿಳಿಸಬೇಕು ಎಂದಾಗ, ಹಲವಾರು ಬಾರಿ ಪೊಲೀಸರಿಗೂ ತಿಳಿಸಿದ್ದೇವೆ. ಅವರು ನಮಗೆ ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಸುಮ್ಮನಿದ್ದೇವೆ ಎಂದರು.

ಆಕ್ರೋಶಗೊಂಡ ಜಿಲ್ಲಾಧಿಕಾರಿಗಳು, ಇಂಥಹ ಗಂಭೀರ ಸಮಸ್ಯೆಯ ಕುರಿತು ಎಸ್ಪಿಯವರಿಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ ಎಂದರು.

ಇನ್ನು ಪಟ್ಟಣದ ಗಾಂಧಿನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿನ ನಾಗರಿಕರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ರೋಣ ನಗರದಲ್ಲಿ ೧೫ ದಿನಗಳಿಗೊಮ್ಮೆ ನೀರು ಬಿಡುತ್ತಿದ್ದಾರಲ್ಲದೆ, ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಶೌಚಾಲಯವೂ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಇಲ್ಲಿನ ಆಡಳಿತ ಮಂಡಳಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಸ್ಥಳದಲ್ಲಿದ್ದ ಮುಖ್ಯಾಧಿಕಾರಿ ಕೃಷ್ಣಾ ನಾಯಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಮತ್ತೊಮ್ಮೆ ಸಮಸ್ಯೆಗಳು ನನ್ನ ಗಮನಕ್ಕೆ ಬಾರದಂತೆ ಕೆಲಸ ನಿರ್ವಹಿಸಿ ಎಂದು ತಾಕೀತು ಮಾಡಿದರು. ನಂತರ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಸಿಡಿಪಿಒ ಕಚೇರಿಯ ಸಿಬ್ಬಂದಿಗಳ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ತಹಸೀಲ್ದಾರ್ ವಾಣಿ ಉಂಕಿಯವರಿಂದ ಮಾಹಿತಿ ಪಡೆದುಕೊಂಡರು.

ಮುದೇನಗುಡಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮತದಾರ ಪಟ್ಟಿ ಕುರಿತು ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ, ಸಾಮಾಜಿಕ ಭದ್ರತೆ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು.

ತಹಸೀಲ್ದಾರ್ ವಾಣಿ ಉಂಕಿ, ಇಒ ಸಂತೋಷ ಪಾಟೀಲ, ಎಇಇ ಜಗದೀಶ ಮಡಿವಾಳರ, ಕಂದಾಯ ನಿರೀಕ್ಷಕ ಎನ್.ಆರ್. ಅಡಿವೇಣ್ಣವರ, ರವಿ ಬಾರಕೇರ ಉಪಸ್ಥಿತರಿದ್ದರು.

ಈ ಬಾರಿ 17 ವರ್ಷದವರು ಸಹ ಮತದಾರ ಪಟ್ಟಿಗೆ ಹೆಸರನ್ನು ಸೇರಿಸಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಾಲೇಜಿನ ಹಾಗೂ 17 ವರ್ಷ ಪೂರೈಸಿದವರು ಈ ಲಾಭವನ್ನು ಪಡೆದುಕೊಳ್ಳಬೇಕು.

-ವೈಶಾಲಿ ಎಂ ಎಲ್, ಜಿಲ್ಲಾಧಿಕಾರಿಗಳು, ಗದಗ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!