ವಿಜಯಸಾಕ್ಷಿ ಸುದ್ದಿ, ರೋಣ
ಜಿಗಳೂರ ಕೆರೆಯು ಅತ್ಯಂತ ಮಹತ್ವಾಂಕ್ಷಿ ಯೋಜನೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಕ್ಷೇತ್ರದ ಶಾಸಕರು ಉದ್ಘಾಟನೆಗೆ ಮುಂದಾಗಿರುವುದು ಹಾಸ್ಯಸ್ಪದವಾಗಿದೆ. ಒಂದು ವೇಳೆ ಉದ್ಘಾಟನೆಗೆ ಮುಂದಾದಲ್ಲಿ ಪರಿಣಾಮ ನೆಟ್ಟಗಿರಲ್ಲ ಎಂದು ಮಾಜಿ ಶಾಸಕ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.
ಅವರು ಬುಧವಾರ ತಾಲೂಕಿನ ಜಿಗಳೂರ ಕೆರೆಗೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
2008ರಲ್ಲಿ ಅಂದಿನ ಸರಕಾರ ಜಿಗಳೂರ ಗ್ರಾಮದ ಹತ್ತಿರ ಬೃಹತ್ ಕೆರೆ ನಿರ್ಮಿಸಲು ಅನುಮೋದನೆ ನೀಡಿತ್ತು. ಆದರೆ ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಲಿಲ್ಲ ಜೊತೆಗೆ ತಾಲೂಕು ಸರಹದ್ದಿನ ಜಮೀನುಗಳನ್ನು ಕೆರೆ ನಿರ್ಮಾಣಕ್ಕೆ ಕೊಟ್ಟರೂ ಸಹಿತ ಯೋಜನೆಯಿಂದ ರೋಣ ಪಟ್ಟಣವನ್ನು ಕೈಬಿಡಲಾಗಿತ್ತು. ನಂತರ 2013 ರಲ್ಲಿ ನಾನು ಶಾಸಕನಾಗಿ ಆಯ್ಕೆಗೊಂಡ ಮೇಲೆ ಯೋಜನೆಗೆ 65 ಕೋಟಿ ರೂ. ಬಿಡುಗಡೆಗೊಳಿಸಿ ರೋಣ ಪಟ್ಟಣವನ್ನು ಈ ಯೋಜನೆಗೆ ಒಳಪಡಿಸಿದೆ. ಈಗ ಈ ಯೋಜನೆಯಲ್ಲಿ ರೋಣ, ಗಜೇಂದ್ರಗಡ, ನರೆಗಲ್ಲ ಪಟ್ಟಣಗಳು ಒಳಪಡಲಿವೆ ಎಂದರು.
ಇನ್ನು ಸ್ಥಳೀಯ ಶಾಸಕರಿಂದ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ 16 ಕೋಟಿ ರೂ. ಅನುದಾನವನ್ನು ನೀಡಿ ಸುಂದರ ಕಟ್ಟಡವನ್ನು ನಿರ್ಮಿಸಲಾಗಿತ್ತು. ವಿಪರ್ಯಾಸ ಅಂದರೆ ಶಾಲೆ ಹಾಗೂ ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯಗಳ ಅಗತ್ಯವಿದ್ದರೂ ಸಹ ಅವುಗಳನ್ನು ಪೂರೈಸದೇ ಕಟ್ಟಡವನ್ನು ಉದ್ಘಾಟಿಸಿ ಮಕ್ಕಳಿಗೆ ಅನಾನುಕೂಲವಾಗುವಂತೆ ಮಾಡಿದ್ದಾರೆ.
ಮಾರನಬಸರಿ, ಸವಡಿ ಸೇರಿ ಅನೇಕ ಗ್ರಾಮಗಳಲ್ಲಿ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸಿದ್ದೆ. ಆದರೆ ಇಂದಿನ ಶಾಸಕರು ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ಅವುಗಳನ್ನು ಉದ್ಘಾಟಿಸಿದ್ದು ಸರಿಯೇ ಎಂದ ಅವರು ಇದೇ ಮಾದರಿಯಲ್ಲಿ ಜಿಗಳೂರ ಕೆರೆ ಉದ್ಘಾಟನೆಗೆ ಮುಂದಾದರೆ ಸಹಿಸಲು ಸಾದ್ಯವಿಲ್ಲ ಎಂದು ಎಚ್ಚರಿಸಿದರು.
ಪುರಸಭೆಯ ಅಧ್ಯಕ್ಷೆ ರಂಗವ್ವ ಭಜಂತ್ರಿ, ತಾಪಂ ಮಾಜಿ ಸದಸ್ಯರಾದ ಪ್ರಭು ಮೇಟಿ, ಶಿದ್ಲಿಂಗಪ್ಪ ಯಾಳಗಿ, ಪರಶುರಾಮ ಅಳಗವಾಡಿ, ಮುತ್ತಣ್ಣ ಸಂಗಳದ, ಯೂಸುಫ್ ಇಟಗಿ, ವಿ.ಬಿ.ಸೋಮನಕಟ್ಟಿಮಠ, ತೋಟಪ್ಪ ನವಲಗುಂದ ಸೇರಿದಂತೆ ಇತರರಿದ್ದರು.
ಕೆರೆಯು 380 ಎಕರೆ ಪ್ರದೇಶದಲ್ಲಿ ನಡೆಯುತ್ತಿದೆ. ಕಾಮಗಾರಿ ಸಂಪೂರ್ಣ ಮುಗಿದಿಲ್ಲ. ಸ್ವಲ್ಪ ನೀರು ಬಿಟ್ಟಿದ್ದಾರೆ. ಈ ಕೆರೆಗೆ 5 ಟಿಎಂಸಿಗಿಂತಲೂ ಹೆಚ್ಚಿನ ನೀರು ಬೇಕು. ಇನ್ನು ಕೆಲಸ ಸಂಪೂರ್ಣಗೊಳ್ಳಲು ನಾಲ್ಕು ತಿಂಗಳು ಬೇಕು. ಉದ್ಘಾಟನೆ ಬಗ್ಗೆ ನನಗೆ ತಿಳಿದಿಲ್ಲ.
-ಗುಂಡುರಾವ್ ಕುಲಕರ್ಣಿ, ಕೆರೆ ಕಾಮಗಾರಿ ವ್ಯವಸ್ಥಾಪಕರು.