ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಸಿಂಗಟಾಲೂರ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ವಿವಿಧೆಡೆ `ಸಡಗರ-ಸಂಭ್ರಮದಿಂದ’ ಆಚರಿಸಲಾಯಿತು.
ನವಗ್ರಹ ಅಧಿಪತಿ ಸೂರ್ಯ ಆರಾಧನೆಯ ಹಬ್ಬದ ದಿನದಂದು, ಸೂರ್ಯ ರಥಸಪ್ತಮಿ ಏರಿ ಸಂಚರಿಸುತ್ತ ಉತ್ತರಾಯಣ ಪುಣ್ಯ ಕಾಲ ಪ್ರಾರಂಭದ ಈ ಹಬ್ಬವನ್ನು ಎಲ್ಲರೂ ಮಕರ ಸಂಕ್ರಾಂತಿ ಹಬ್ಬ ಎಂದು ಆಚರಿಸುತ್ತಾರೆ.
ಈ ಸಂದರ್ಭದಲ್ಲಿ ಪವಿತ್ರ ತುಂಗಭದ್ರಾ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ಪುನೀತರಾದರು, ನದಿ ತೀರದ ದೇವಸ್ಥಾನಗಳಾದ ಮದಲಘಟ್ಟ ಅಂಜನೇಯ ದೇವಸ್ಥಾನ, ಸಿಂಗಟಾಲೂರ ಶ್ರೀವೀರಭದ್ರೇಶ್ವರ ದೇವಸ್ಥಾನ, ಬಿದರಳ್ಳಿ ಶ್ರೀ ರೇಣುಕಾದೇವಿ ದೇವಸ್ಥಾನ, ಗುಮ್ಮಗೋಳ ಶ್ರೀಗೋಣಿಬಸವೇಶ್ವರ, ವಿಠಲಾಪೂರ ಗ್ರಾಮದ ನದಿ ದಂಡೆಯ ದೇವರಿಗೆ, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಭಕ್ತರು ನೆರವೇರಿಸಿದರು.
ತುಂಗಭದ್ರಾ ನದಿ ದಂಡೆಯ ವಿವಿದಡೆ ನೂರಾರು ಭಕ್ತರು ಮಿಂದೆದ್ದ ದೃಶ್ಯ ಸಾಮಾನ್ಯವಾಗಿತ್ತು. ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿ ಮಕ್ಕಳಿಂದ ಮೊದಲುಗೊಂಡು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಲ್ಲ ವಯೋಮಾನದವರು ಎಳ್ಳು-ಬೆಲ್ಲ ಬೀರುವ ಮೂಲಕ ತಾಲೂಕಿನ ವಿವಿಧ ಜಲಮೂಲ ತಾಣಗಳಲ್ಲಿ ಸಂಭ್ರಮಿಸಿದರು.
ನಂತರ ತಮ್ಮ ಮನೆಗಳಿಂದ ತಂದಿದ್ದ ಜೋಳದ ರೊಟ್ಟಿ, ಬದನೆಕಾಯಿ ಪಲ್ಯ , ಮಡಿಕೆಕಾಳು ಪಲ್ಯ, ಹೋಳಿಗೆ ಸೇರಿದಂತೆ ವಿವಿಧ ತರಹದ ಸಿಹಿ ತಿಂಡಿ ತಿನಿಸುಗಳನ್ನು ಕುಟುಂಬದ ಸದಸ್ಯರು ಸೇರಿ ಸವಿದರು.