ವಿಜಯಸಾಕ್ಷಿ ಸುದ್ದಿ, ಗದಗ:
‘ಜಿಲ್ಲೆಯಾದ್ಯಂತ ಶಾಲೆಗಳ ಬಂದ್ ಬಗ್ಗೆ ಜಿಲ್ಲಾಡಳಿತದವರು ತಜ್ಞರನ್ನು ಕರೆದು ತಜ್ಞರ ವರದಿ, ಶಿಫಾರಸ್ಸಿನಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಬಾರದು’ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.
ಗದಗ ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದು ಓಮಿಕ್ರಾನ್ ಸಂಭವನೀಯ ಪ್ರಕರಣದ ಸುದ್ದಿ ಇದ್ದು, ಹದಿನೈದು ದಿನಗಳು ಕಳೆಯುತ್ತಾ ಬಂದರೂ ಖಚಿತವಾಗಿಲ್ಲ. ಅದ್ಯಾಕೆ ಆಗ್ತಿಲ್ಲ ಅಂತಾ ಗೊತ್ತಿಲ್ಲ. ಆದರೆ, ಜಿಲ್ಲಾಡಳಿತ ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದೆ, ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. 450 ಹಾಸಿಗೆಗಳ ಆಸ್ಪತ್ರೆ ಮುಕ್ತಾಯಗೊಳ್ಳಲು ಬಂದಿದೆ. ಆಸ್ಪತ್ರೆಯ ಕಟ್ಟಡಕ್ಕೆ ಬಣ್ಣ ಹಚ್ಚುವ ಕಾರ್ಯ ಪ್ರಾರಂಭವಾಗಿದ್ದು, ಶೀಘ್ರವೇ ಆಸ್ಪತ್ರೆ ಜನಸೇವೆಗೆ ಲೋಕಾರ್ಪಣೆಗೊಳ್ಳಬೇಕು. ಇನ್ನೂ ಬಹಳಷ್ಟು ಕೆಲಸ ಬಾಕಿ ಇದ್ದು, ಮೂರನೇ ಅಲೆಯ ವೇಳೆ ಹೆಚ್ಚಿನ ಸೌಲಭ್ಯ ಬಳಸಿಕೊಳ್ಳಲು ಸರ್ಕಾರ ಆಸ್ಪತ್ರೆಯ ಸ್ವಲ್ಪ ಭಾಗವನ್ನಾದರೂ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಲಾಕ್ ಡೌನ್ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ರಾಷ್ಟ್ರ ಮಟ್ಟದಲ್ಲಿಯೂ ಲಾಕ್ ಡೌನ್ ಚಿಂತನೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಇದರಿಂದ ಬಡವರ ಬದುಕು ಅಸಹನೀಯವಾಗುತ್ತದೆ. ಈ ವೇಳೆ ಬಡವರಿಗೆ ಅನುಕೂಲವಾಗುವಂತೆ ಲಾಕ್ ಡೌನ್ ಜೊತೆಗೆ ಪರಿಹಾರದ ಬಗ್ಗೆಯೂ ಮಾಡಬೇಕು ಎಂದರು.
ಮೇಕೆದಾಟು ಪಾದಯಾತ್ರೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ಮೇಕೆದಾಟು ಪಾದಯಾತ್ರೆ ಇವತ್ತು, ನಿನ್ನೆಯ ನಿರ್ಣಯ ಅಲ್ಲ. ತಿಂಗಳ ಹಿಂದೆಯೇ ನಿರ್ಧರಸಿತ್ತು. ಈ ವೇಳೆ ಸರ್ವ ಪಕ್ಷಗಳ ಸಭೆ ಕರೆಯಲಿಲ್ಲ. ಕೇಂದ್ರ ಸರ್ಕಾರ ಬಳಿ ನಿಯೋಗ ತೆಗೆದುಕೊಂಡು ಹೋಗಲಿಲ್ಲ. ಕೆಲಸ ಪ್ರಾರಂಭಿಸಲಿಲ್ಲ. ಏನಾಗಿದೆ ಎಂಬ ಬಗ್ಗೆ ಪಾರದರ್ಶಕವಾಗಿ ಹೇಳಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಾದಯಾತ್ರೆ ಮಾಡಲಾಗುತ್ತಿದೆ.
ಇವತ್ತಿನವರೆಗೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಪಾದಯಾತ್ರೆ ವೇಳೆ ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತಿದ್ದಾರೆ. ಹೀಗಿದ್ದಾಗ್ಯೂ ಪ್ರಕರಣ ದಾಖಲಿಸಿದ್ದು, ಕಾನೂನು ಹೋರಾಟ ನಡೆಸಲಾಗುವುದು’ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.