ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ……
ವಿಜಯಸಾಕ್ಷಿ ಸುದ್ದಿ, ನವಲಗುಂದ
ಹಲ್ಲಿ ಬಿದ್ದ ಬಿಸಿಯೂಟವನ್ನು ಸೇವಿಸಿ 35 ಶಾಲಾ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ ಘಟನೆ ತಾಲೂಕಿನ ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದಿದೆ.
ಮುಂಜಾನೆ ಪರೀಕ್ಷೆ ಮುಗಿಸಿ ಮದ್ಯಾಹ್ನ ಊಟ ಮಾಡಿ ಮತ್ತೊಂದು ಪರೀಕ್ಷೆಗೆ ಹಾಜರಾಗಬೇಕಿತ್ತು. ಮಕ್ಕಳು ಊಟ ಮಾಡುವಾಗ ಮಕ್ಕಳು ತಲೆ ಸುತ್ತು ಬಂದು ಕೆಲವರು ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಅರ್ಧದಷ್ಟು ಮಕ್ಕಳು ಬಿಸಿಯೂಟವನ್ನು ಸೇವಿಸಿದ್ದರು. ಅನ್ನದ ಪಾತ್ರೆಯಲ್ಲಿ ಹಲ್ಲಿ ಕಂಡ ತಕ್ಷಣವೇ ಮಕ್ಕಳಿಗೆ ಊಟ ಸೇವಿಸದಂತೆ ಎಚ್ಚರಿಕೆ ನೀಡಲಾಯಿತು. ಇದರ ಮಧ್ಯೆಯೇ ಕೆಲ ಮಕ್ಕಳು ಆಹಾರ ಸೇವಿಸಿದ್ದರಿಂದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪದೇ ಪದೇ ಇಂತಹ ಘಟನೆ ತಾಲೂಕಿನಲ್ಲಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮಕ್ಕಳಿಗೆ ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ.
ಬಿಸಿಯೂಟದಲ್ಲಿ ಹಲ್ಲಿ ಕಂಡ ತಕ್ಷಣವೇ ಶಾಲೆಯ ಮಕ್ಕಳಿಗೆ ಒಂದೇ ಒಂದು ತುತ್ತನ್ನು ತಿನ್ನಲು ಬಿಟ್ಟಿಲ್ಲ. ಅಸ್ವಸ್ಥಗೊಂಡ ಮಕ್ಕಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ.
-ಎಮ್. ಎಚ್. ಸಾಯಿಗೋಳ, ಮುಖ್ಯೋಪಾಧ್ಯಾಯರು
35 ಮಕ್ಕಳು ಆಹಾರ ಸೇವಿಸಿದ್ದು ಅದರಲ್ಲಿ 7 ಮಕ್ಕಳಿಗೆ ವಾಂತಿ ಕಂಡ ಬಂದ ಹಿನ್ನೆಲೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣಪಾಯದ ತೊಂದರೆ ಕಂಡುಬಂದಿಲ್ಲ. ಪಾಲಕರು ಹೆದರುವ ಅವಶ್ಯಕತೆಯಿಲ್ಲ.
-ಎಸ್. ಎಸ್. ಕೆಳದಿಮಠ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ