ವಿಜಯಸಾಕ್ಷಿ ಸುದ್ದಿ, ನರಗುಂದ
ಪಟ್ಟಣದ ಆರೂಢಜ್ಯೋತಿ ಕಲ್ಯಾಣ ಮಂಟಪದಲ್ಲಿ ನೀರು ಹಾವೊಂದು ಕಾಣಿಸಿಕೊಂಡು ಅಲ್ಲಿಯ ಕೆಲಸಕ್ಕೆಂದು ತೆರಳಿದ್ದ ಸಿದ್ದರಾಮೇಶ್ವರ ನಗರದ ಮಹಿಳೆಯೊಬ್ಬಳಿಗೆ ಕಡಿದ ಪರಿಣಾಮ, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಮದುವೆ ಸಮಾರಂಭಗಳೆಲ್ಲ ಮುಗಿದ ಮೇಲೆ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾಗ, ಪಾತ್ರೆ ತೊಳೆಯುವ ಕಟ್ಟೆಯ ನಳದ ಬಳಿಯಲ್ಲಿಯೇ ಇದ್ದ ಹಾವನ್ನು ಗಮನಿಸದೇ ತುಳಿದಿದ್ದು, ಹಾವು ಮಹಿಳೆಗೆ ಕಡಿದು ಪರಾರಿಯಾಗಿತ್ತು.
ಗಾಬರಿಗೊಂಡ ಕಲ್ಯಾಣ ಮಂಟಪದಲ್ಲಿದ್ದವರು ಉರಗ ತಜ್ಞ ಸ್ನೇಕ್ ಬುಡ್ಡಾರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದರು. ಅತ್ತಿತ ಸರಿದಾಡುತ್ತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದ್ದ ಹಾವನ್ನು ಹಿಡಿದು, ಗಮನಿಸಿದ ಸ್ನೇಕ್ ಬುಡ್ಡಾ, ಇದೇನೂ ವಿಷಕಾರಿ ಹಾವಲ್ಲ, ಪ್ರಾಣಾಪಾಯವೇನೂ ಇಲ್ಲ ಎಂದು ತಿಳಿಸಿದರು.
ಪ್ರಾಥಮಿಕ ಚಿಕಿತ್ಸೆಗಾಗಿ ತಾಲೂಕಾ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಕರೆದೊಯ್ಯುವಂತೆ ತಿಳಿಸಿದ ಸ್ನೆಕ್ ಬುಡ್ಡಾ, ಹಾವಿನ ಜೊತೆಗೂಡಿಯೇ ತಾವೂ ಆಸ್ಪತ್ರೆಗೆ ತೆರಳಿದರು. ಹಾವನ್ನು ಗಮನಿಸಿದ ವೈದ್ಯರು, ನೀರು ಹಾವು ಕೇವಲ ನಂಜೇ ಹೊರತೂ ವಿಷಕಾರಿಯಲ್ಲವೆಂದು ತಿಳಿಸಿ, ಪ್ರಾಥಮಿಕ ಉಪಚಾರ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಹಾವನ್ನು ಸುರಕ್ಷಿತವಾಗಿ ಹಿಡಿದ ಬುಡ್ಡೇಸಾಬ್ ನಿರ್ಜನ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ.