ಗದಗ ಜಿಲ್ಲೆಯ 27 ಜನ ಸಮಾಜ ಕಂಟಕರಿಗೆ ಕಾದಿದೆ ಶಿಕ್ಷೆ; ಆದೇಶ ಬಂದ ತಕ್ಷಣವೇ ಗಡಿಪಾರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಜಿಲ್ಲೆಯಾದ್ಯಂತ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವಂತೆ ಹಾಗೂ ಸಮಾಜದ ಶಾಂತಿಯನ್ನು ಹಾಳುಮಾಡುವ ಕೃತ್ಯಗಳಲ್ಲಿ ತೊಡಗಿಕೊಂಡ ವ್ಯಕ್ತಿಗಳನ್ನು ಗಡಿಪಾರು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಗದಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕುಕೃತ್ಯಗಳಲ್ಲಿ ತೊಡಗಿಕೊಂಡು ಕಾನೂನುಬಾಹಿರ ಚಟುವಟಿಕೆಗಳಾದ ಓ.ಸಿ/ ಮಟಕಾದಂಥಹ ಜೂಜಾಟ, ಗಾಂಜಾದಂಥಹ ಮಾದಕ ವಸ್ತುಗಳ ಮಾರಾಟ, ಅಕ್ರಮ ಸಾರಾಯಿ ಮಾರಾಟ, ಸಾರ್ವಜನಿಕರ ಆಸ್ತಿ ಮತ್ತು ಜೀವಹಾನಿ ಉಂಟುಮಾಡುತ್ತಿರುವ, ಇದನ್ನೇ ವೃತ್ತಿಯಾಗಿಸಿಕೊಂಡ, ಇಂಥ ಜನರ ಸಹವಾಸಕ್ಕೆ ಬಿದ್ದು ಅಪರಾಧ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸುತ್ತ ಬಂದಿದ್ದರೂ ಕೂಡ ಇಂಥವರು ತಮ್ಮ ಹಳೆಯ ಚಾಳಿಯನ್ನು ಬಿಟ್ಟು ಬದಲಾಗಲಿಲ್ಲ ಮತ್ತು ತಮ್ಮ ಹಳೆಯ ಕೆಲಸಗಳನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ.

ಇಂಥವರನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗಿಯೇ ಇರುತ್ತಾರೆ, ಸಮಾಜದಲ್ಲಿ ಅಶಾಂತಿಯನ್ನುಂಟುಮಾಡುವ ಕೆಲಸಗಳಲ್ಲಿ ಮುಂದುವರಿಯುತ್ತಾರೆ ಮತ್ತು ಉಳಿದವರಿಗೂ ಕೂಡ ಇಂಥದೇ ಅಪರಾಧಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾಗಬಹುದು ಎಂ ಉದ್ದೇಶದಿಂದ ಇಂಥವರ ಮೇಲೆ ಕರ್ನಾಟಕ ಪೊಲೀಸ್ ಅಧಿನಿಯಮ-1963 ಕಲಂ;56(ಜಿ),(ಎಸ್),(ಎ) ಕಾಯ್ದೆಯ ಅಡಿಯಲ್ಲಿ ಗದಗ ಜಿಲ್ಲೆಯಿಂದ ಗಡಿಪಾರು ಮಾಡುವದು ಅನಿವಾರ್ಯವಾಗಿದೆ.

ಈ ಸಂಬಂಧ 78(3) ಕೆ.ಪಿ ಕಾಯ್ದೆ-154 ಪ್ರಕರಣ(180 ಆರೋಪಿಗಳ ಬಂಧನ), ಬೆಟ್ಟಿಂಗ್-13 ಪ್ರಕರಣ (22 ಆರೋಪಿಗಳ ಬಂಧನ) , 87 ಕೆಪಿ ಕಾಯ್ದೆ- 70 ಪ್ರಕರಣ(450 ಆರೋಪಿಗಳ ಬಂಧನ), ಅಬಕಾರಿ ಕಾಯ್ದೆ- 138 ಪ್ರಕರಣ(140 ಆರೋಪಿಗಳ ಬಂಧನ), ಹಾಗೂ ಮರಳು ಮಾಫಿಯಾ ವಿರುದ್ಧ 30 ಪ್ರಕರಣಗಳನ್ನು ದಾಖಲಿಸಿ 37 ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ. ಅಲ್ಲದೇ, 39 ಪ್ರಕರಣಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ತಹಶೀಲ್ದಾರರಿಗೆ ಒಪ್ಪಿಸಿ ಒಟ್ಟೂ 7,84,238.ರೂಗಳ ದಂಡ ವಿಧಿಸಲಾಗಿದೆ.

ಗಡಿಪಾರು ವಿಷಯಕ್ಕೆ ಸಂಬಂಧಿಸಿ ಈಗಾಗಲೇ 6 ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಈ ಪೈಕಿ ಲಕ್ಷ್ಮೇಶ್ವರದ ಒಬ್ಬನಿಗೆ ಜು.7ರಂದು ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದ್ದು, ಇನ್ನೂ 5 ಜನರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಪ್ರಸ್ತುತ ಸಾಲಿನಲ್ಲಿಯೂ ಕಾನೂನು ಹಾಗೂ ಪೊಲೀಸ್ ಇಲಾಖೆಯ ಯಾವುದೇ ಭಯವಿಲ್ಲದೇ ಅಪರಾಧೀ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಜಿಲ್ಲೆಯ ಒಟ್ಟೂ 27 ವ್ಯಕ್ತಿಗಳನ್ನು ಗುರುತಿಸಿ ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ಆದೇಶ ಬಂದ ತಕ್ಷಣವೇ ಈ ಎಲ್ಲ 27 ಜನರನ್ನೂ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಿ ನಿಗಾ ಇಡಲಾಗುತ್ತದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here