ಎಂಟು ವರ್ಷಗಳ ಹಿಂದೆ ಸಿಕ್ಕಿಬಿದ್ದಿದ್ದ ಆರೋಪಿಗಳು…..
ವಿಜಯಸಾಕ್ಷಿ ಸುದ್ದಿ, ಗದಗ
ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿದ್ದ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಎಸ್.ಎಂ. ಕೃಷ್ಣ ನಗರಕ್ಕೆ ಹೋಗುವ ರಸ್ತೆ ಬಳಿಯ ಸೇತುವೆ ಕಟ್ಟೆಯ ಮೇಲೆ 27.2.2015ರ ಸಂಜೆ 4.30ರ ಹೊತ್ತಿಗೆ ಅಕ್ರಮವಾಗಿ 2ಕೆಜಿಯಷ್ಟು ಗಾಂಜಾವನ್ನು ತಮ್ಮ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಲ್ಲಿದ್ದಾಗ ಆರೋಪಿಗಳಾದ ರಮೇಶ ರತ್ನಪ್ಪ ಕಾಳೆ ಹಾಗೂ ರತ್ನಪ್ಪ ಮೋನಪ್ಪ ಕಾಳೆ ಸಿಕ್ಕಿಬಿದ್ದಿದ್ದು, ಆರೋಪಿತರ ವಿರುದ್ಧ ಗದಗ ಉಪವಿಭಾಗದ ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ತನಿಖೆ ಪೂರೈಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಎಸ್ ಶೆಟ್ಟಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಿಬ್ಬರಿಗೂ ಜೂ.13 ರಂದು ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(2)(ಬಿ) ಅಡಿಯಲ್ಲಿ 5 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಬಸವಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.