ವಿಜಯಸಾಕ್ಷಿ ಸುದ್ದಿ, ಗದಗ
ಕೋಟ್ಯಂತರ ರೂ. ಬೆಲೆಬಾಳುವ ಆಭರಣಗಳೊಂದಿಗೆ ಅನುಮಾನಾಸ್ಪದವಾಗಿ ನಗರದ ಅಂಗಡಿಯೊಂದರ ಎದುರು ನಿಂತಿದ್ದ ಇಬ್ಬರು ವ್ಯಕ್ತಿಗಳನ್ನು ಗದಗ ಶಹರ ಪೊಲೀಸರು ಆಭರಣಗಳೊಂದಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಾರ್ಚ್ 15, ಬುಧವಾರ ಸಂಜೆ 4.10ರ ಸಮಯಕ್ಕೆ ನಗರದ ಟಾಂಗಾಕೂಟ್ ಬಳಿಯಿರುವ ಶ್ರೀ ಸಾರಿ ಸೆಂಟರ್ ಎದುರಿನ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ 33 ವರ್ಷದ ಮುಂಬೈ-ಮಜಗಾಂವ್‌ನ ಅಭಿಷೇಕ ರಾಮಣಲಾಲ ಜೈನ್ ಹಾಗೂ 27 ವರ್ಷದ ಮುಂಬೈ-ವಿರಾರದ ಮಾಹೀಪಾಲ ಹಿಮ್ಮತಲಾಲ ಜೈನ್ ಇವರಿಬ್ಬರೂ 4 ಕೆ.ಜಿ. 46 ಗ್ರಾಂ ತೂಕದ 1,71,65,100 ರೂ. ಬೆಲೆಬಾಳುವ ಬಂಗಾರದ ಆಭರಣಗಳೊಂದಿಗೆ ಸುಳಿದಾಡುತ್ತಿದ್ದರು.
ಅನುಮಾನಗೊಂಡ ಶಹರ ಠಾಣೆಯ ಪಿಎಸ್ಐ ಎಸ್.ಬಿ.ಸಿಂಧೆ ಈ ಇಬ್ಬರು ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ ಬಂಗಾರದ ವ್ಯಾಪಾರಿಗಳೆಂದು ತಿಳಿದರೂ, ತಮ್ಮ ಬಳಿಯಿರುವ ಬಂಗಾರದ ಆಭರಣಗಳ ಬಗ್ಗೆ ಸೂಕ್ತ ಉತ್ತರ ನೀಡದೇ, ರಿಸಿಪ್ಟ್/ಬಿಲ್‌ಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಸದರಿ ಆಭರಣಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿ ಸಂಪಾದಿಸಿ ತಂದಿರಬಹುದು ಎಂಬ ಅನುಮಾನದ ಮೇಲೆ ಎನ್.ಸಿ ನಂ. 06/2023 ಕಲಂ. 98 ಕೆಪಿ ಕಾಯ್ದೆಯ ಪ್ರರಕಾರ ಸರ್ಕಾರಿ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.