ವಿಜಯಸಾಕ್ಷಿ ಸುದ್ದಿ, ವಿಜಯಪುರ
ತಮ್ಮ ಪ್ರವಚನಗಳು, ಸರಳ ಜೀವನ, ಸರಳ ನಡೆನುಡಿಗಳಿಂದ ನಾಡಿನಾದ್ಯಂತ ಹಾಗೂ ದೇಶಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು (81) ಸೋಮವಾರ ರಾತ್ರಿ ನಿಧನರಾದರು.
ಕಳೆದ ಹಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಆಸ್ಪತ್ರೆಗೆ ಹೋಗಲು ಒಪ್ಪದಿದ್ದುದರಿಂದ ಅವರ ಆಶ್ರಮದಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಕೊನೆಯುಸಿರೆಳೆದಿದ್ದಾರೆಂದು ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಘೋಷಿಸಿದರು.
ಶ್ರೀಗಳ ಅಂತ್ಯಕ್ರಿಯೆ ಮಂಗಳವಾರ ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆ 4 ಗಂಟೆಯವರೆಗೆ ಆಶ್ರಮದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಂತರ ಸಂಜೆ 5 ಗಂಟೆಯವರೆಗೆ ಸೈನಿಕ ಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಸಂತಾಪ: ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಸಚಿವ ಸಿ.ಸಿ ಪಾಟೀಲ, ಶಾಸಕ ಎಚ್. ಕೆ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ. ಎಸ್ ಪಾಟೀಲ, ಮಾಜಿ ಸಂಸದ ಐ.ಜಿ ಸನದಿ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.