ತೋಟದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ತಾಲೂಕಿನ ಕಳಸಾಪೂರ ಗ್ರಾಮದ ತೋಟವೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವೊಂದು ಸ್ಥಳಕ್ಕೆ ದೌಡಾಯಿಸಿದೆ.

ಗುರುವಾರದಂದು ಕಳಸಾಪೂರ ಗ್ರಾಮದಿಂದ ನಾಗಾವಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಇರುವ ಹಳ್ಳವೊಂದರ ಪಕ್ಕದ ರಾಮನಗೌಡ ಎಂಬುವವರ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ 26 ಸೆಕೆಂಡ್ ಇರುವ ವಿಡಿಯೋ ಒಂದು ನಿನ್ನೆ ಇಡೀ ದಿನ‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಂತರ ಕಬಲಾಯತಕಟ್ಟಿ ತಾಂಡಾದಲ್ಲೂ ಅಂದೇ ರಾತ್ರಿ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೀತಿ ವಿಡಿಯೋ ಹರದಾಡಿದ ಪರಿಣಾಮ ಕಳಸಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಭೀತಿ ಆವರಿಸಿದೆ.

ಕಳಸಾಪೂರ ಗ್ರಾಮ ಪಂಚಾಯತಿ ಕೂಡ ಡಂಗೂರು ಸಾರಿದ್ದು, ಗ್ರಾಮಸ್ಥರಲ್ಲಿ ಒಬ್ಬಂಟಿಯಾಗಿ ತಿರುಗದಂತೆ ಮನವಿ ಮಾಡಿದೆ.

ಕಳಸಾಪೂರ ಗ್ರಾಮಕ್ಕೆ ಭೇಟಿ ನೀಡಿರುವ ಗದಗ ತಾಲೂಕಿನ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಲಮನಿ ಹಾಗೂ ಸಿಬ್ಬಂದಿ, ತೋಟದಲ್ಲಿ ಚಿರತೆ ನಡೆದಾಡಿರುವ ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಲಮನಿ, ಡಿಎಫ್ ಓ ಅವರ ಆದೇಶದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುರುವಾರ ದಿನ ಈ ಚಿರತೆ ಕಂಡು ಬಂದಿದೆ ಎಂದು ಗ್ರಾಮದ ರಾಮನಗೌಡ್ರ ಎಂಬುವವರು ಮಾಹಿತಿ ನೀಡಿದ್ದಾರೆ. ವಿಡಿಯೋದಲ್ಲಿ ನೋಡಿದ ಹಾಗೇ ಮೇಲ್ನೋಟಕ್ಕೆ ಚಿರತೆ ಕಂಡು ಬಂದಿದೆ. ಆ ಕುರಿತು ಇನ್ನೂ ಪರಿಶೀಲನೆ ನಡೆಸಿದ್ದೇವೆ ಎಂದರು.

ಕಪ್ಪತಗುಡ್ಡದಿಂದ ಈ ಚಿರತೆ ಬಂದಿದ್ದು, ಮತ್ತೆ ಮರಳಿ ಹೋಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಜನ ಭಯಪಡದೇ ಇರಲು ಮನವಿ ಮಾಡಿರುವ ಅಧಿಕಾರಿಗಳು, ದಿನವೂ ಮುಂಜಾನೆ ಹಾಗೂ ಸಂಜೆ ಕಳಸಾಪೂರ, ಕಬಲಾಯತಕಟ್ಟಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ತಂಡವೊಂದು ಗಸ್ತು ತಿರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here