ಗದಗ ಜಿಲ್ಲೆಗೆ ಮತ್ತೊಂದು ಗರಿ; ಡಿವೈಎಸ್ಪಿ ಪಾಟೀಲರಿಗೆ ಕೇಂದ್ರ ಗೃಹ ಸಚಿವರ ಪದಕ, ಪ್ರಶಂಸೆ

0
Spread the love

ಹಲವು ಪ್ರಕರಣಗಳನ್ನು ಭೇದಿಸಿದ ಹೆಗ್ಗಳಿಕೆ

Advertisement

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ರಾಮಗೇರಿ ಗ್ರಾಮದ, ಸದ್ಯ ಸಿಐಡಿಯಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿರುವ ಶಂಕರಗೌಡ ವೀರನಗೌಡ ಪಾಟೀಲ ಅವರು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ಕೇಂದ್ರ ಗೃಹಸಚಿವರ ಪದಕಕ್ಕೆ ಭಾಜನರಾಗಿದ್ದು, ಈ ಭಾಗದ ಜನರಲ್ಲಿ ಹರ್ಷ ತಂದಿದೆ.

ರಾಮಗೇರಿ ಗ್ರಾಮಸ್ಥರು ಪಾಟೀಲರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಅತ್ಯುತ್ತಮ ತನಿಖೆಗಾಗಿ ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರ ಪದಕವನ್ನು ನೀಡಲಾಗಿದ್ದು, ಅದರಲ್ಲಿ ವೈಜ್ಞಾನಿಕ ಹಾಗೂ ಕ್ಷಿಪ್ರ ತನಿಖೆ ನಡೆಸಿದ ಸಿಐಡಿ ಡಿವೈಎಸ್ಪಿ ಶಂಕರಗೌಡ ವೀರನಗೌಡ ಪಾಟೀಲ ಅವರು ಭಾಜನರಾಗಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮದ ತನಿಖಾಧಿಕಾರಿಯೂ ಆಗಿರುವ ಶಂಕರಗೌಡ 2019ರಲ್ಲಿ ಸೇಡಂ ವೃತ್ತದ ಸಿಪಿಐ ಆಗಿದ್ದ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಯಾಕಾಪುರದಲ್ಲಿ ನಡೆದಿದ್ದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಿದ್ದರು. ಎಫ್‌ ಐಆರ್ ದಾಖಲಾದ 101 ದಿನಗಳಲ್ಲಿಯೇ ಆರೋಪಿ ಯಲ್ಲಪ್ಪ ಎಂಬಾತನಿಗೆ ಗಲ್ಲು ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೂರಕ ದಾಖಲೆಗಳನ್ನು ಸಂಗ್ರಹಿಸಿ ದೋಷಾರೂಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಶಂಕರರಗೌಡ ಅವರಿಗೆ ಕೇಂದ್ರ ಸರಕಾರದ ಈ ಪದಕ ನೀಡಲಾಗಿದೆ.

ಶಂಕರಗೌಡ ಪಾಟೀಲ ಅವರು ರಾಜ್ಯದಲ್ಲಿ ನಡೆದ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್.ಡಿ. ಪಾಟೀಲ, ಮುಖಂಡ ಮಹಾಂತೇಶ ಪಾಟೀಲ, ನಾಯಕಿ ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿದ ಸಿಐಡಿ ತಂಡದ ಭಾಗವಾಗಿರುವದನ್ನು ಇಲ್ಲಿ ಸ್ಮರಿಸಬಹುದು.

2019ರ ಡಿಸೆಂಬರ್ 2ರಂದು ಘಟನೆ ನಡೆದಿತ್ತು. ಅಂದಿನ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ನನ್ನ ಮೇಲೆ ವಿಶ್ವಾಸವಿರಿಸಿ ತನಿಖೆಯ ಜವಾಬ್ದಾರಿ ವಹಿಸಿದ್ದರು. 22 ದಿನಗಳಲ್ಲಿಯೇ ಆರೋಪ ಪಟ್ಟಿ ಸಲ್ಲಿಸಿದ್ದೆವು. ಶೀಘ್ರಗತಿಯಲ್ಲಿ ಪ್ರಕರಣದ ತನಿಖೆ ನಡೆಸಿದ್ದರಿಂದ ನ್ಯಾಯಾಲಯವೂ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿತು. ಇದು ನಮ್ಮ ಕಾರ್ಯಕ್ಕೆ ದೊರೆತ ಮನ್ನಣೆಯಾಗಿದ್ದು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಎಲ್ಲ ಜನರ ಹಾರೈಕೆ, ಹಿರಿಯರ ಆಶೀರ್ವಾದ ನಮ್ಮ ಕಾರ್ಯದಕ್ಷತೆಗೆ ಈ ಗೌರವ ದೊರಕಿರುವದು ಸಂತಸ ತಂದಿದೆ.

-ಶಂಕರಗೌಡ ಪಾಟೀಲ, ಡಿವೈಎಸ್‌ಪಿ

Spread the love

LEAVE A REPLY

Please enter your comment!
Please enter your name here