HomeCrime Newsಮಲ್ಲಸಮುದ್ರ ಪ್ರಕರಣ ಯಾರೂ ಅಡ್ವಾಂಟೆಜ್ ತಗೋಬೇಡಿ; ಐಜಿಪಿ ಸತೀಶಕುಮಾರ್ ಎಚ್ಚರಿಕೆ

ಮಲ್ಲಸಮುದ್ರ ಪ್ರಕರಣ ಯಾರೂ ಅಡ್ವಾಂಟೆಜ್ ತಗೋಬೇಡಿ; ಐಜಿಪಿ ಸತೀಶಕುಮಾರ್ ಎಚ್ಚರಿಕೆ

Spread the love

  • ಬೆಳಗಾವಿ ವಿಭಾಗದ ಐಜಿಪಿ ಸತೀಶ್ ಕುಮಾರ್ ಭೇಟಿ, ಪರಿಶೀಲನೆ

ವಿಜಯಸಾಕ್ಷಿ ಸುದ್ದಿ, ಗದಗ

ಮಲ್ಲಸಮುದ್ರ ಗ್ರಾಮದಲ್ಲಿ ಇಬ್ಬರ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ವಿಭಾಗದ ಐಜಿಪಿ ಸತೀಶ್ ಕುಮಾರ್ ಶುಕ್ರವಾರ ಮಲ್ಲಸಮುದ್ರ ಗ್ರಾಮಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ, ಘಟನೆಯ ಸಂಪೂರ್ಣ ವಿವರ ಪಡೆದುಕೊಂಡರು.

ನಂತರ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 9ರಂದು ಸಂಜೆ ಮೊಹರಂ ಹಬ್ಬದ ಮೆರವಣಿಗೆಯ ವೇಳೆ ಗಲಾಟೆಯಾಗಿ ಇಬ್ಬರಿಗೆ ಚೂರಿ ಇರಿತದ ಪ್ರಕರಣ ನಡೆದಿತ್ತು. ಪ್ರಸ್ತುತ ದಾದಾಪೀರ್ ಅಲಿಯಾಸ್ ತೌಶೀಪ್ ಎಂಬಾತನಿಗೆ ಗದಗ ಜಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮುಷ್ತಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಇದು ಕೋಮುಗಲಭೆ ಎಂಬರ್ಥದಲ್ಲಿ ಬಿಂಬಿತವಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಲೆಂದು ಬಂದಿದ್ದೇನೆ. ಈಗಾಗಲೇ ಈ ಪ್ರಕರಣ ಯುವಕರ ಮಧ್ಯೆ ವೈಯಕ್ತಿಕ ಕಾರಣಕ್ಕಾಗಿ ನಡೆದಿದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಸ್ತುತ ಗದಗ ಜಿಲ್ಲೆ ಹಾಗೂ ಮಲ್ಲಸಮುದ್ರದಲ್ಲಿ ಯಾವುದೇ ಗಲಭೆಗಳಾಗುವ ವಾತಾವರಣವಿಲ್ಲ. ಈ ಬಗ್ಗೆ ಇಲಾಖೆಯೂ ನಿಗಾ ವಹಿಸಿದೆ. ಈಗ ವಿವಿಧ ಹಬ್ಬಗಳು ನಡೆಯುತ್ತಿವೆ. ಇನ್ನೇನು ಚುನಾವಣೆಯೂ ಹತ್ತಿರ ಬರುತ್ತಿದೆ.

ಹೀಗಾಗಿ ಎಲ್ಲರಲ್ಲೂ ಉತ್ಸಾಹದ ಮಟ್ಟ ತುಸು ಹೆಚ್ಚಾಗಿಯೇ ಇರುತ್ತದೆ. ಈ ಬಗ್ಗೆ ಎಚ್ಚರವಾಗಿರುವದು ಇಲಾಖೆಯ ಕರ್ತವ್ಯವಾಗಿದೆ. ಇಂತಹ ಘಟನೆಗಳು ಯಾವುದೇ ಧರ್ಮ, ಕೋಮಿನವರಿಂದ ನಡೆದಿದ್ದರೂ ಅಂಥವರ ಚಲನವಲನಗಳ ಬಗ್ಗೆ ಗಮನವಿಟ್ಟು ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಬೇಕಾಗುತ್ತದೆ. ಮತ್ತು ಅಪರಾಧ ಎಸಗಿದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ವಿಷಯಗಳ ಬಗ್ಗೆ ಎಸ್.ಪಿ ಹಾಗೂ ಡಿಎಸ್ಪಿ ಅವರ ಬಳಿ ಚರ್ಚಿಸಿದ್ದೇವೆ ಎಂದು ಹೇಳಿದರು.

ಪ್ರಸ್ತುತ ಮಲ್ಲಸಮುದ್ರದಲ್ಲಿಯೂ ಯಾವುದೇ ಭಯದ ವಾತಾವರಣವಿಲ್ಲ. ಗ್ರಾಮಸ್ಥರೊಂದಿಗೆ ಚರ್ಚಿಸಿದಾಗ, ಹುಡುಗರು ಅವರವರೇ ಜಗಳ ಮಾಡಿಕೊಂಡಿದ್ದಷ್ಟೇ, ಹೊರತಾಗಿ ಇದರಲ್ಲಿ ಕೋಮುಗಳಿಗೆ ಸಂಬಂಧಿಸಿದ ಯಾವುದೇ ಹಿನ್ನೆಲೆಯಿಲ್ಲ ಎಂದಿದ್ದಾರೆ. ಉತ್ತರ ಕರ್ನಾಟಕ, ಗದಗ ಭಾಗಗಳಲ್ಲಿ ಮೊಹರಂ ಹಬ್ಬವನ್ನು ಎಲ್ಲಾ ಕೋಮು, ಸಮುದಾಯದವರೂ ಸೇರಿ ಒಟ್ಟಾಗಿಯೇ ಆಚರಿಸುತ್ತಾರೆ. ಸುಮ್ಮನೇ ವದಂತಿಗಳಿಗೆ ಕಿವಿಗೊಟ್ಟು ಇಂಥ ಪ್ರಕರಣಗಳಿಗೆ ಬೇರಾವುದೇ ಬಣ್ಣ ಹಚ್ಚುವ ಅಗತ್ಯ ಇಲ್ಲ ಎಂದರು.

ಪ್ರಸ್ತುತ ಪ್ರಕರಣದಲ್ಲಿ ಕೇವಲ ಒಂದು ಕೋಮಿನವರ ದೂರನ್ನು ಮಾತ್ರ ಪರಿಗಣಿಸಲಾಗಿದೆ ಎಂಬ ಸುದ್ದಿಗಳು ಹರಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಐಜಿಪಿ ಸತೀಶ್ ಕುಮಾರ್, ಪೊಲೀಸ್ ಇಲಾಖೆಯವರು ಎಂದಿಗೂ ದೂರು ನೀಡಲು ಬಂದವರು ಯಾವ ಸಮಾಜದವರು, ಯಾವ ಧರ್ಮದವರು ಎಂಬುದನ್ನು ನೋಡುವದಿಲ್ಲ. ಯಾರು ದೂರು ದಾಖಲಿಸಿದರೂ ನಾವು ಸ್ವೀಕರಿಸುತ್ತೇವಷ್ಟೆ.

ಇಂಥಹ ವಿಷಯಗಳನ್ನಿಟ್ಟುಕೊಂಡು ಯಾರೂ ಅಡ್ವಾಂಟೆಜ್ ಪಡೆದುಕೊಳ್ಳುವ ವಿಚಾರ ಮಾಡಬಾರದು ಎಂದು ಸ್ಪಷ್ಟಪಡಿಸಿದರು.

ಐಜಿಪಿ ಸತೀಶ್ ಕುಮಾರ್ ಅವರೊಂದಿಗೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!