ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಜು.20ರಿಂದ 26ರವರೆಗೆ ವಿಶೇಷ ಡ್ರೈವ್ ನಡೆಸಿದ ಜಿಲ್ಲಾ ಪೊಲೀಸರು ವರ್ಷಗಳಿಂದಲೂ ಸಮಾಜಕ್ಕ ಧಕ್ಕೆಯಾಗಿರುವ, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಗಾಂಜಾ ಮಾರಾಟ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನಿನಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.
ಬೆಟಗೇರಿಯಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು 220ಗ್ರಾಂ.(ಅಂದಾಜು ಬೆಲೆ 22,200.ರೂ) ಗಾಂಜಾ ಜಪ್ತಿ, ಗದಗ ಗ್ರಾಮೀಣ ಭಾಗದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 257 ಗ್ರಾಂ.(ಅಂದಾಜು ಬೆಲೆ 25,700.ರೂ) ಗಾಂಜಾ ಜಪ್ತಿ, ಶಿರಹಟ್ಟಿಯಲ್ಲಿ ಇಬ್ಬರು ಆರೋಪಿಗಳಿಂದ 230ಗ್ರಾಂ.( ಅಂದಾಜು ಬೆಲೆ 23,0000.ರೂ) ಗಾಂಜಾ, ಲಕ್ಷ್ಮೇಶ್ವರದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು 3.6 ಕೆ.ಜಿ ತೂಕದ ಹಸಿ ಗಾಂಜಾ(ಅಂದಾಜು ಬೆಲೆ 36,000.ರೂ) ಹಾಗೂ ಗಜೇಂದ್ರಗಡದಲ್ಲಿ ಇಬ್ಬರು ಆರೋಪಿತರಿಂದ 202 ಗ್ರಾಂ(ಅಂದಾಜು ಬೆಲೆ 5,000.ರೂ) ಗಾಂಜಾ ವಶಪಡಿಸಿಕೊಡ್ಡಿದ್ದು, ಒಟ್ಟೂ ಎಂಟು ಪ್ರಕರಣಗಳಲ್ಲಿ 1,11,900.ರೂ ಬೆಲೆಬಾಳುವ 4 ಕೆಜಿ 509ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಟಗೇರಿ ಠಾಣೆಯ ಪೊಲೀಸರು ಬಾಲಪ್ಪ ಗೋವಿಂದಪ್ಪ ಹರಿಣಶಿಕಾರಿ, ಗದಗ ಗ್ರಾಮೀಣ ಪೊಲೀಸರು ಮೀನಾಕ್ಷಿ ನಾಗರಾಜ್ ಮುತಗಾರ ಹಾಗೂ ಬಬಿತಾ ಶಿವಾಜಿ ಬೈಲಾರಿ, ಶಿರಹಟ್ಟಿ ಪೊಲೀಸರು ಮಾದೇವಕ್ಕ ದೇವಪ್ಪ ಕಂಬಳಿ ದೇವಪ್ಪ ಪುಟ್ಟಪ್ಪ ಕಂಬಳಿ, ಲಕ್ಷ್ಮೇಶ್ವರ ಪೊಲೀಸರು ದಯಾನಂದ ನೀಲಪ್ಪ ಬಸಾಪೂರ, ಗಜೇಂದ್ರಗಡ ಪೊಲೀಸರು ಮಹಾಂತಯ್ಯ ಸಣ್ಣರಾಚಯ್ಯ ಹಿರೇಮಠ ಹಾಗೂ ಚನ್ನವ್ವ ಚಂದಪ್ಪ ಹರಿಣಶಿಕಾರಿ ಎಂಬುವರನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಇಂಥಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡ ವ್ಯಕ್ತಿಗಳನ್ನು ಗುರುತಿಸಿ ಅವರ ಮೇಲೆ ಹೆಚ್ಚಿನ ನಿಗಾ ಇಟ್ಟು ಗಡಿಪಾರು ಶಿಕ್ಷೆಯಲ್ಲದೇ ಹೆಚ್ಚಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಎಚ್ಚರಿಕೆ ನೀಡಿದ್ದು, ಸದರಿ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಪತ್ತೆಮಾಡಿ ಕ್ರಮ ಜರುಗಿಸಿದ ಇಲಾಖೆಯ ತನಿಖಾಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.