-ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ನೇತೃತ್ವ—ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿಯವರ ಕನಸಿನ ಕೂಸಿಗೆ ಮೂರರ ಸಂಭ್ರಮ
ವಿಜಯಸಾಕ್ಷಿ ಸುದ್ದಿ, ಗದಗ
ಕ್ರೀಡಾ ಕ್ಷೇತ್ರ ಗಮನದಲ್ಲಿಟ್ಟುಕೊಂಡು ಆರಂಭಗೊಂಡ ಜಿಸಿಎಲ್ ಇದೀಗ ಗದಗ ಹಬ್ಬ, ಹಳ್ಳಿ ಹಬ್ಬ, ವಾರ್ಡ್ ಹಬ್ಬದ ರೂಪು ಪಡೆದು ಶನಿವಾರದಿಂದ ಈ ಹಬ್ಬಗಳ ಸರಣಿಗೆ ಅಧಿಕೃತ ಚಾಲನೆ ದೊರಕಲಿದೆ ಎಂದು ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.
ಬೆಟಗೇರಿಯ ರಂಗಪ್ಪಜ್ಜನಮಠದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಸಿಎಲ್‌ನ ಎರಡು ಆವೃತ್ತಿಗಳು ಯಶಸ್ಸು ಕಂಡಿವೆ. ಎರಡನೇ ಆವೃತ್ತಿಯಲ್ಲಿ ಸ್ವಲ್ಪ ಅಡೆತಡೆಗಳ ಬಂದರೂ ಯಾವ ತೊಂದರೆ ಇಲ್ಲದೇ ಜಿಸಿಎಲ್ ಯಶಸ್ವಿಯಾಗಿ ಮುಗಿದಿತ್ತು. 2019ರಲ್ಲೇ ಕ್ರೀಡಾಕ್ಷೇತ್ರಕ್ಕೆ ಮೀಸಲಾಗಿದ್ದ ಜಿಸಿಎಲ್‌ಗೆ ವಿವಿಧ ಕ್ಷೇತ್ರಗಳಲ್ಲೂ ತೊಡಗಿ ಹಬ್ಬದ ರೂಪ ಕೊಡಲು ನಿರ್ಧರಿಸಲಾಗಿತ್ತು. ಕೊರೋನಾ ಕಾರಣದಿಂದ ಅನುಷ್ಠಾನಕ್ಕೆ ತರಲು ಆಗಿರಲಿಲ್ಲ. ಇದೀಗ ಮೂರನೇ ಆವೃತ್ತಿಗೆ ಪದಾರ್ಪಣೆ ಮಾಡಿರುವ ಜಿಸಿಎಲ್, ಹಬ್ಬದ ರೂಪ ಪಡೆದಿದೆ ಎಂದರು.
ಬೆಟಗೇರಿಯ 5 ವಾರ್ಡ್‌ಗಳಲ್ಲಿ ಮಹಿಳೆಯರು, ಮಕ್ಕಳು, ಕ್ರೀಡಾಪಟುಗಳನ್ನು, ಸಂಗೀತಗರಾರನ್ನು ಒಳಗೊಂಡು ವಾರ್ಡ್ ಹಬ್ಬ ಆಯೋಜಿಸಲಾಗಿದೆ ಎಂದು ಅವರು ಹೇಳಿದರು
ಗದಗ ಹಬ್ಬದ 3 ನೇ ಜಿಸಿಎಲ್ ಆವೃತ್ತಿ ಆಗಸ್ಟ್ 20ರಿಂದ ಪಗಡೆ ಆಟದೊಂದಿಗೆ ಬೆಟಗೇರಿಯ 5 ರಿಂದ 9 ನೇ ವಾರ್ಡ್‌ಗಳಲ್ಲಿ ಆರಂಭವಾಗಲಿದೆ. ಈ ಹಬ್ಬ
ರಾಜಕೀಯ, ಜಾತಿ, ಧರ್ಮ, ವಯಸ್ಸಿನ ಯಾವುದೇ ತಾರತಮ್ಯ ಇಲ್ಲದೆ ಮುಖ್ಯವಾಗಿ ಹಿರಿಯರಿಂದ ಬಂದ ಕಲೆ, ಸರಸ್ವತಿ, ಪರಂಪರೆಯನ್ನು ಎತ್ತಿ ಹಿಡಿಯುವ ಧೈಯೋದ್ದೇಶದೊಂದಿಗೆ ಗದಗ ಹಬ್ಬದ ಕಾರ್ಯ ಯೋಜನೆ ಮಾಡಲಾಗಿದೆ. ಎಲ್ಲರೂ ಸೇರಿಕೊಂಡು ಯಶಸ್ವಿಗೊಳಿಸುವ ಸಂಕಲ್ಪವನ್ನು ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಹೊಂದಿದೆ ಎಂದು ವಿವರಿಸಿದರು.
ಈಗಾಗಲೇ ಗದಗ ಹಬ್ಬದ ಲೋಗೋವನ್ನು ಬೆಳಧಡಿ ತಾಂಡಾದಲ್ಲಿ ಬಂಜಾರಾ ಹಬ್ಬದ ಲೋಗೋ, ಬಿಂಕದಕಟ್ಟಿಯಲ್ಲಿ ವಾಲಿಬಾಲ್, ಮುಳಗುಂದದಲ್ಲಿ ಕಬಡ್ಡಿ, ಗದುಗಿನ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ವಿವಿಧ ಕ್ರೀಡೆಗಳ ಲೋಗೋವನ್ನು ಲೋಕಾರ್ಪಣೆ ಮಾಡಲಾಗಿದೆ. ಆಧುನಿಕತೆಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಟಿವಿ, ಕಂಪ್ಯೂಟರ್ , ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ದೇಶಿಯ ಕ್ರೀಡೆಗಳು, ಕಲೆಗಳು, ಸಾಹಿತ್ಯ, ಚಿತ್ರಕಲೆ, ರಂಗಕಲೆಗೆ ಪೋಷಣೆ ಇಲ್ಲದಂತಾಗಿದೆ. ಈ ಎಲ್ಲ ಕಲೆಗಳಿಗೆ ಮರುಜೀವ ತುಂಬುವ ಸಲುವಾಗಿ ಗದಗ ಹಬ್ಬ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕೃತಪುರದ ಶಿಖರ 2022 ಬೆಟಗೇರಿಯಲ್ಲಿ ಕಲೆ, ಕ್ರೀಡೆ, ಸಂಗೀತ,ಸಾಹಿತ್ಯದಲ್ಲಿ ಆಮೋಘ ಸಾಧನೆ ಮಾಡಿದ ಮಾಡಿದ ಸಾಧಕ ಮಹನೀಯರನ್ನು ಒಳಗೊಂಡ ಮೆರವಣಿಗೆ ಬೆಟಗೇರಿ ರಂಗಪ್ಪಜ್ಜನ ಮಠದವರೆಗೆ ಸಾಗಿ ಬರಲಿದೆ. ರಂಗಪ್ಪಜ್ಜನ ಮಠದ ಆವರಣದಲ್ಲಿ ಪಗಡೆ ಸ್ಪರ್ಧೆ ಏರ್ಪಡಿಸುವ ಮೂಲಕ ಗದಗ ಬೆಟಗೇರಿ ಅವಳಿ ನಗರದಲ್ಲಿ ‘ಗದಗ ಹಬ್ಬ’ಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಬೆಟಗೇರಿ 3 ರಿಂದ 9ನೇ ವಾರ್ಡ್‌ಗಳಲ್ಲಿ ಆರಂಭವಾಗುವ ‘ಗದಗ ಹಬ್ಬ’ ಮಹಿಳೆಯರಿಗಾಗಿ ವಿಶೇಷ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಸ್ಪರ್ಧೆ, ಸೂಜಿಯಲ್ಲಿ ದಾರ ಪೋಣಿಸುವುದು, ಬಕೆಟ್‌ನ ನೀರನ್ನು ಬೊಗಸೆಯಿಂದ ಗ್ಲಾಸ್‌ನಲ್ಲಿ ಸಂಗ್ರಹಿಸುವುದು, ಸಿರಿಧಾನ್ಯದಿಂದ ತಯಾರಿಸಿದ ಆಹಾರ ಪದಾರ್ಥಗಳ ಸ್ಪರ್ಧೆ, ಸೇವಂತಿಗೆ ಹೂ ಕೈಯಿಂದ ಕಟ್ಟಿ ಮಾಲೆ ಮಾಡುವುದು, ಹಾಡಿನ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆದರ್ಶ ದಂಪತಿ ಸ್ಪರ್ಧೆ, ಲಿಂಬೂ ಸ್ಪೂನ್, ಗೋಣಿ ಚೀಲದ ಓಟ, ಮ್ಯೂಜಿಕಲ್ ಚೇರ್, ಹಗ್ಗ ಜಗ್ಗಾಟ,ಹಾಗೂ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, ಹಗ್ಗದಾಟ (ಸ್ಕಿಪ್ಪಿಂರ್ಗ), ನೃತ್ಯ ಸ್ಪರ್ಧೆ (ದೇಶಿಯ ಹಾಗೂ ವಿದೇಶಿ), ಮಕ್ಕಳು ಸಿದ್ದಪಡಿಸಿದ ಕಲಾಕೃತಿ ಪ್ರದರ್ಶನ ಹಾಗೂ ಸ್ಪರ್ಧೆ, ಮಾಡಲಿಂಗ್, ಲಗೋರಿ ಸ್ಪರ್ಧೆ, ಆಗ್ನಿಪಥ (ರಿಲ್ಸ್ ಸಿದ್ದ ಪಡಿಸುವಿಕೆ),ಕಪ್ಪೆ ಜಿಗಿತ, ಏಕಪಾತ್ರಭಿನಯ, ಭಾಷಣ ಸ್ಪರ್ಧೆ (ಸ್ವಾತಂತ್ರ್ಯ ಹೋರಾಟಗಾರರ ಕುರಿತು) ಆಟಗಳನ್ನು ಏರ್ಪಡಿಸಲಾಗಿದೆ ಎಂದರು.
ಗದಗ ಹಬ್ಬದ ಭಾಗವಾಗಿ ಬೆಟಗೇರಿ ವಾರ್ಡ್ ಹಬ್ಬ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಹಾಗೂ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಸಂಜೆ 4.30 ಕ್ಕೆ ಉದ್ಘಾಟಿಸುವರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಆಗಮಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅನಿಲ ಅಬ್ಬಿಗೇರಿ, ಸಿದ್ದು ಪಲ್ಲೇದ, ಪ್ರೇಮನಾಥ ಬಣ್ಣದ, ಪ್ರಶಾಂತ ನಾಯ್ಕರ, ಅಂಬರೀಶ ಹಿರೇಮಠ, ಮಂಜುನಾಥ ಮ್ಯಾಗೇರಿ, ಮನೋಹರ್ ಮುನವಳ್ಳಿ, ಶ್ರೀನಿವಾಸ ಹುಬ್ಬಳ್ಳಿ, ಶಿವರಾಜಗೌಡ ಹಿರೇಮನಿ ಪಾಟೀಲ, ರಾಘವೇಂದ್ರ ಯಳವತ್ತಿ, ರಮೇಶ ಹತ್ತಿಕಾಳ, ಜಗನ್ನಾಥ ಸಾ ಬಾಂಡಗೆ, ವಿಜಯಲಕ್ಷ್ಮಿ ಮಾನ್ವಿ, ಅಶ್ವಿನಿ ಜಗತಾಪ್ ಮತ್ತಿತರರು ಇದ್ದರು.
ಪಗಡೆಯಾಟದ ಮೂಲಕ ಚಾಲನೆ
ಮಹಾಭಾರತ, ಪೌರಾಣಿಕ ಮಹತ್ವದ ದೇಶೀ ಕ್ರೀಡೆ ಪಗಡೆಯಾಟಕ್ಕೆ ಪಾಂಚಜನ್ಯ ಮೊಳಗಿಸುವ ಮೂಲಕ ಗದಗ ಹಬ್ಬ ಅದ್ದೂರಿಯಾಗಿ ಚಾಲನೆಗೊಳ್ಳಲಿದೆ. ಈಗಾಗಲೇ ಪಗಡೆಯಾಟಕ್ಕೆ ಸುಮಾರು 60 ತಂಡಗಳು ನೋಂದಣಿಯಾಗಿದ್ದು, ಇನ್ನೂ 10-12 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬೆಟಗೇರಿಯ ವೀರಭದ್ರೇಶ್ವರ ದೇವಸ್ಥಾನದಿಂದ 501 ಕುಂಭಮೇಳದೊಂದಿಗೆ ಬೆಟಗೇರಿಯ ಪ್ರತಿ ವಾರ್ಡ್‌ನ ಇಬ್ಬರು ಹಿರಿಯರನ್ನು ರಥದಲ್ಲಿ ಮೆರವಣಿಗೆ ಮೂಲಕ ರಂಗಪ್ಪಜ್ಜಮಠಕ್ಕೆ ಕರೆ ತರಲಾಗುವುದು. ಆನಂತರ ಹಬ್ಬ ಆರಂಭಗೊಳ್ಳಲಿದೆ ಎಂದು ಅನಿಲ್ ಮೆಣಸಿನಕಾಯಿ ಹಬ್ಬದ ಚಾಲನೆಯ ಸ್ವರೂಪವನ್ನು ವಿವರಿಸಿದರು.
“ಈ ಸಲದ ಜಿಸಿಎಲ್‌ನ ಹಬ್ಬಗಳ ಸರಣಿಗೆ ಯಾವ ಅಡೆತಡೆ ಬರದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನತೆ ಸಹ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡೆಗಳ ಬಗ್ಗೆ ಆಸಕ್ತಿ, ಪಾಲ್ಗೊಳ್ಳುವಿಕೆಯಲ್ಲಿ ಉತ್ಸಾಹ ಹೊಂದಿದ್ದಾರೆ. ಜನಮನ ತಣಿಸುವ ಉದ್ದೇಶದಿಂದ ಗದಗ ಹಬ್ಬ ಆಯೋಜಿಸಲಾಗುತ್ತಿದೆಯೇ ಹೊರತು ಬೇರೆ ಯಾವ ಕಾರಣಗಳು ಇಲ್ಲ.”
-ಅನಿಲ್ ಮೆಣಸಿನಕಾಯಿ, ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ಸಂಸ್ಥಾಪಕರು ಅಧ್ಯಕ್ಷರು.