ವಿಜಯಸಾಕ್ಷಿ ಸುದ್ದಿ, ಗದಗ
ಹಳೆಯ ದ್ವೇಷದಿಂದ ಮಹಿಳೆಯೊಬ್ಬಳನ್ನು ಕೊಲೆ ಮಾಡಿ, ಪ್ರಕರಣವನ್ನು ಮುಚ್ಚಿಹಾಕಲು ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಶಿಕ್ಷೆಯನ್ನು ಪ್ರಕಟಿಸಿದೆ.
ಘಟನೆಯ ಹಿನ್ನೆಲೆ
ಪ್ರಕರಣದ ಆರೋಪಿ ಹನುಮಂತಪ್ಪ ದುರಗಪ್ಪ ಬಂಡಿವಡ್ಡರ ಇವನು ಗದಗ ಗ್ರಾಮೀಣ ಪೋಲೀಸ್ ಠಾಣಾ ಹದ್ದಿ ಪೈಕಿ ಹರ್ತಿ ಗ್ರಾಮದಲ್ಲಿ ಹಳೆಯ ಸಿಟ್ಟಿನಿಂದ ಮೃತ ಲಕ್ಷ್ಮವ್ವಳ ಮನೆಗೆ ಹೋಗಿ ದಿ. 02.10.2015ರಂದು ರಾತ್ರಿ 11.30 ಗಂಟೆಗೆ ಕುತ್ತಿಗೆಗೆ ಹಗ್ಗದಿಂದ ಉರುಳು ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಕೊಲೆ ಮಾಡಲು ಉಪಯೋಗಿಸಿದ ಹಗ್ಗವನ್ನು ಹರ್ತಿ ಗ್ರಾಮದ ಬಯಲು ಕಡೆಗೆ ಹೋಗಿ ಗಾಂವಠಾಣಾ ಜಾಗೆಯ ಪಾಳುಬಾವಿಯ ಹತ್ತಿರ ಕಂಟಿಯಲ್ಲಿ ಎಸೆದಿದ್ದ. ಲಕ್ಷ್ಮವ್ವ ಉಪಚಾರ ಫಲಿಸದೇ ದಿ. 24.10.2015ರಂದು ಸಂಜೆ 5.10 ಗಂಟೆಗೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ಆರೋಪಿತನ ವಿರುದ್ಧ ಗದಗ ಗ್ರಾಮೀಣ ವೃತ್ತದ ಅಂದಿನ ವೃತ್ತ ಆರಕ್ಷಕ ಅಧಿಕ್ಷಕ ಸೋಮಶೇಖರ.ಜಿ. ಜುಟ್ಟಲ್ ಅವರು ತನಿಖೆಯನ್ನು ಪೂರೈಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ.ಎಸ್. ಶೆಟ್ಟಿ ಅವರು, ಸದರಿ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿತನಾದ ಹನುಮಂತಪ್ಪ ದುರಗಪ್ಪ ಬಂಡಿವಡ್ಡರ ಇವನಿಗೆ ಆಗಸ್ಟ್ 03ರಂದು ಭಾ.ದಂ.ಸಂ ಕಲಂ: 304(2) ಭಾದಂಸಂ.ರಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ ರೂ. 10,000 ದಂಡ, ದಂಡ ತುಂಬಲು ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ ಮತ್ತು 201 ಭಾದಂಸಂ.ರಡಿ 1 ವರ್ಷ ಸಾದಾ ಶಿಕ್ಷೆ ಹಾಗೂ ರೂ. 2,000 ದಂಡ, ದಂಡ ತುಂಬಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸವಿತಾ.ಎಂ. ಶಿಗ್ಲಿ ಇವರು ಸಾಕ್ಷಿ ವಿಚಾರಣೆ ಮಾಡಿಸಿದ್ದು, ಸರ್ಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.