ವಿಜಯಸಾಕ್ಷಿ ಸುದ್ದಿ, ಗದಗ
ಮೊಹರಂ ಹಬ್ಬದ ಕೊನೆಯ ದಿನವಾದ ಮಂಗಳವಾರ ನಡೆದ ಮೆರವಣಿಗೆಯಲ್ಲಿ ಕಾಲು ತುಳಿದ ಕ್ಷುಲ್ಲಕ ಕಾರಣಕ್ಕೆ ಇಬ್ಬರನ್ನು ಚಾಕುವಿನಿಂದ ಇರಿದ ಘಟನೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್; ಶ್ರೀರಾಮ ಸೇನಾ ಕಾರ್ಯಕರ್ತ ಸೇರಿ ಮೂವರ ಬಂಧನ, ಪೊಲೀಸರ ಸರ್ಪಗಾವಲು
ಇರಿತಕ್ಕೊಳಗಾದವರನ್ನು ತೌಸೀಫ್ ಹೊಸಮನಿ (23) ಹಾಗೂ ಮುಷ್ತಾಕ್ ಹೊಸಮನಿ (24) ಎಂದು ಗುರುತಿಸಲಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮೆರವಣಿಗೆಯಲ್ಲಿ ಕಾಲು ತುಳಿದ ಕ್ಷುಲ್ಲಕ ಕಾರಣಕ್ಕೆ ಶ್ರೀರಾಮಸೇನೆಯ ಕಾರ್ಯಕರ್ತ ಸೋಮು ಗುಡಿ ಎಂಬಾತ ಹೊಸಮನಿ ಸಹೋದರರೊಂದಿಗೆ ತಗಾದೆ ತೆಗೆದಿದ್ದರಿಂದ ಗಲಾಟೆ ನಡೆದಿದೆ. ಗ್ರಾಮಸ್ಥರು ಜಗಳ ಬಿಡಿಸಿದ್ದಾರೆ. ಮೆರವಣಿಗೆ ಬಿಟ್ಟು ಮತ್ತೊಂದು ಸ್ಥಳದಲ್ಲಿ ಕಾಯ್ದು ಇಬ್ಬರಿಗೂ ಚಾಕುವಿನಿಂದ ಇರಿದ ಸೋಮು ಗುಡಿ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಗಾಯಗೊಂಡವರ ಸಹೋದರ ಹೇಳುವ ಪ್ರಕಾರ, ಆರ್ ಎಸ್ ಎಸ್ ಗೆ ಸೇರಿದ ಸೋಮು ಗುಡಿ ಹಾಗೂ ಎಳೆಂಟು ಜನ ಚಾಕು ಇರಿದಿದ್ದಾರೆ ಎಂದು ಆರೋಪಿಸಿದ್ದಾನೆ.
ಗಾಯಾಳುಗಳಿಗೆ ಜಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ತೌಸೀಫ್ ಎಂಬಾತನ ಸ್ಥಿತಿ ಗಂಭೀರವಾಗಿದೆ. ಜಿಮ್ಸ್‌ಗೆ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.