ವಿಜಯಸಾಕ್ಷಿ ಸುದ್ದಿ, ಗದಗ:
ಬೆಳಗಾವಿಯಲ್ಲಿ ಗಲಾಟೆ ಮಾಡಿದವರೆಲ್ಲ ಕಾಂಗ್ರೆಸಿಗರು. ಗಲಭೆ ಮಾಡಿದವರಲ್ಲಿ ಕೆಲವರು ಕಿಡಿಗೇಡಿಗಳು, ಕಾಂಗ್ರೆಸ್ ಪಕ್ಷದ ಚೇಲಾಗಳಿದ್ದಾರೆ. ಹೀಗಾಗಿ ಎಮ್ಇಎಸ್ ಯಾವುದೇ ಪಕ್ಷದಲ್ಲಿದ್ರೂ ಅರೆಸ್ಟ್ ಮಾಡುವ ಕೆಲಸ ಆಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದರು.
ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರರ ಮೇಲೆ ದಾಳಿಗಳಾಗಿವೆ. ನನಗೆ ಗೊತ್ತಿರುವಂತೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಕರ್ನಾಟಕದಲ್ಲಿ ಇರುವ ಕೆಲವು ಪುಂಡರು ಕುಮ್ಮಕ್ಕು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್, ಎಮ್ಇಎಸ್ ಯಾರೇ ಇದ್ದರೂ ಕ್ಷಮಿಸುವ ಪ್ರಶ್ನೆ ಇಲ್ಲ’ ಎಂದರು.
‘ಬೆಳಗಾವಿಯಲ್ಲಿ ಶಿವಾಜಿ, ರಾಯಣ್ಣ ನಮಗಾಗಿ ಪ್ರಾಣತ್ಯಾಗ ಮಾಡಿದ್ದು, ಯಾವುದೇ ವ್ಯಕ್ತಿ, ಸಂಘಟನೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳತ್ತೇವೆ.
ಮಹಾನ್ ನಾಯಕರಿಗೆ ಅಗೌರವ ತೋರಿದವರನ್ನು ಅರೆಸ್ಟ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ದುಷ್ಕೃತ್ಯಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು
ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಗಲಾಟೆ ಮಾಡುವ ಸಂಪ್ರದಾಯವನ್ನು ಎಂಇಎಸ್ ಮೈಗೂಡಿಸಿಕೊಂಡಿದೆ.
ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸದನ ನಡೆಯುತ್ತಿದ್ದು, ಗಲಾಟೆ ಸಂಪ್ರದಾಯ ಕನ್ನಡಿಗರು ಸಹಿಸಲ್ಲ.
ಕಾಂಗ್ರೆಸ್ ರ‌್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿ ‘ಅಧಿವೇಶನ ನಡೆಯಲು ಕಾಂಗ್ರೆಸ್ ನಾಯಕರು ಬಿಡುತ್ತಿಲ್ಲ. ರಾಜಕಾರಣದಲ್ಲಿ ಕಾಂಗ್ರೆಸ್ ನಾಟಕ ಜೋರಾಗಿದೆ.
ಅಧಿವೇಶನ ನಡೆಸಲು ಕಾಂಗ್ರೆಸ್ ನಾಯಕರು ಅನುವು ಮಾಡಿಕೊಡಬೇಕು. ಉತ್ತರ ಕರ್ನಾಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಜನರಿಗೆ ತೋರಿಸುವ ಸಲುವಾಗಿ ಟ್ರ್ಯಾಕ್ಟರ್, ಎತ್ತಿನ ಬಂಡಿ ತರುವ ನಾಟಕ ಮಾಡುತ್ತಿದ್ದೀರಿ’ ಎಂದು ಟಾಂಗ್ ನೀಡಿದರು.
ಎಂಇಎಸ್ ಬ್ಯಾನ್ ಗೆ ಕನ್ನಡ ಪರ ಸಂಘಟನೆಗಳು ಆಗ್ರಹ ವಿಚಾರದ ಕುರಿತು ಮಾತನಾಡಿ ‘ಎಂಇಎಸ್ ಬ್ಯಾನ್ ಮಾಡುವ ವಿಚಾರಕ್ಕೆ ಸಂಪೂರ್ಣ ಬೆಂಬಲವಿದೆ.
ಬ್ಯಾನ್ ಮಾಡುವುದರಿಂದ ಅನುಕೂಲ ಆಗುತ್ತದೆ.
ಈ ಬಗ್ಗೆ ಕೇಂದ್ರಕ್ಕೆ ಸಾಕಷ್ಟು ವರದಿಯನ್ನೂ ನೀಡಿದ್ದೇವೆ ಎಂದು ಹೇಳಿದರು.
‘ಸಿಎಂ ಬದಲಾವಣೆ ವಿಚಾರವನ್ನು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಯಾವುದೇ ಬದಲಾವಣೆ ಇಲ್ಲ. ಕೇವಲ ಊಹಾಪೋಹ. ಯಾರೋ ಮಾತಾಡ್ತಾರೆ. ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆಯಲ್ಲಿ ನಡೆಯಲಿದೆ ಎಂದು ನಮ್ಮ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಇದ್ದರು.