ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಈ ಬಾರಿಯ ಮಳೆಯು ರೈತರ ಸಂಪೂರ್ಣ ಬೆಳೆಯನ್ನು ಹಾಳುಮಾಡಿದ್ದು, ಪ್ರತಿವರ್ಷ ಒಂದಿಲ್ಲೊಂದು ಸಂಕಷ್ಟಗಳಿಂದ ಬಳಲುತ್ತಿರುವ ರೈತರಿಗೆ ಈ ಬಾರಿ ಮೇಲೇಳಲಾರದ ಹೊಡೆತ ಕೊಟ್ಟಿದ್ದು ರೈತರು ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.

ಬಿಟ್ಟುಬಿಡದೇ ಸುರಿಯುತ್ತಿರುವ ಈ ಭಾರಿ ಮಳೆಗೆ ಕೈಗೆ ಬಂದ ಬೆಳೆಯು ನೀರು ಪಾಲಾಗುತ್ತಿರುವುದನ್ನು ಕಂಡ ರೈತ ಅಸಹಾಯಕನಾಗಿ ತಲೆ ಮೇಲೆ ಕೈಹೊತ್ತು ಕೂಡುವಂತಾಗಿದೆ. ಜಮೀನುಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ.
ಈ ಬಾರಿ ಕಡಿಮೆ ಪ್ರಮಾಣದ ಇಳುವರಿ ಬಂದಿರುವ ಶೇಂಗಾದಲ್ಲಿ ಬರೀ ಮಣ್ಣು ಬೆರೆತು ಹೋಗಿದ್ದು, ಮಾರುಕಟ್ಟೆಯಲ್ಲಿ ಅದನ್ನು ಕೊಳ್ಳುವವರು ಇಲ್ಲದಂತಾಗಿದೆ. ಇದರಿಂದಾಗಿ ಹೊಲದಲ್ಲಿಯೇ ಕಿತ್ತು ಹಾಕಿರುವ ಶೇಂಗಾ ಬೆಳೆಯನ್ನು ರೈತರು ರಸ್ತೆಯ ಪಕ್ಕದಲ್ಲಿ ನಿಂತ ನೀರಿನಲ್ಲಿ ತೊಳೆಯುತ್ತಿದ್ದಾರೆ. ಅಳಿದು ಉಳಿದ ಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಹಿಂಗಾರು ಬಿತ್ತನೆ ಮುಗಿಯುತ್ತಾ ಬಂದರೂ ಮಳೆ ಮಾತ್ರ ತನ್ನ ಆರ್ಭಟ ನಿಲ್ಲಿಸುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ಶೇಂಗಾ ಬಿತ್ತನೆಯಿಂದ ಕಟಾವು ಹಂತದವರೆಗೂ ಪ್ರತಿ ಎಕರೆಗೆ ಸುಮಾರು 20 ಸಾವಿರ ರೂ. ಖರ್ಚು ಮಾಡಿದ್ದು, ಬೆಳೆ ಕಟಾವು ಸಮಯದಲ್ಲಿ ಮಳೆ ಆಗಿದ್ದರಿಂದ ಹೊಲಗಳಲ್ಲಿ ಬೆಳೆ ಕೊಳೆತು ಹೋಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಗೆ ರೈತ ಯಾವ ಬೆಳೆಗಳಿಂದ ಲಾಭ ಸಿಗದೇ ತೀವ್ರ ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಪ್ರತಿವರ್ಷ ಬೆಳೆ ಹಾಳಾಗುತ್ತಿರುವುದರಿಂದ ರೈತರು ಸಾಲದ ಸುಳಿಯಿಂದ ಹೊರಬರಲಾರದ ಪರಿಸ್ಥಿತಿ ತಲುಪಿದ್ದಾರೆ. ಇನ್ನೊಂದೆಡೆ ಮೇವು ಕೂಡ ಕೊಳೆತು ಹೋಗಿದ್ದು ಮೇವು ಸಂಗ್ರಹವಿಲ್ಲದೇ ಜಾನುವಾರು ಸಂರಕ್ಷಣೆ ಕೂಡ ಚಿಂತೆಯಾಗಿದೆ.
ಆರು ಎಕರೆ ಶೇಂಗಾ ಬಿತ್ತನೆ ಮಾಡಿದ್ದೆ. ಮಳೆಯಿಂದಾಗಿ ಶೇಂಗಾ ಬೆಳೆ ಭೂಮಿಯಲ್ಲಿ ಸಿಕ್ಕಿಕೊಂಡು ಎಲ್ಲಾ ನಾಶವಾಗಿದೆ. ಉಳಿದ ಬೆಳೆಯನ್ನು ನೀರಿನಲ್ಲಿ ತೊಳೆದು ರಸ್ತೆಯಲ್ಲಿ ಒಣಗಿ ಹಾಕಿದ್ದೇನೆ. ಇದು ಒಬ್ಬರ ಕಥೆಯಲ್ಲ. ಬಹುತೇಕ ರೈತರ ಪರಿಸ್ಥಿತಿ ಇದೇ ಆಗಿದೆ. ಸರಕಾರ ಕೊಡುವ ಅಲ್ಪ ಸ್ವಲ್ಪ ಪರಿಹಾರ ಧನ ಯಾವುದಕ್ಕೂ ಸಾಲದು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರೈತರ ಜೀವ ಉಳಿಸುವ ಕಾರ್ಯವನ್ನು ಸರಕಾರ ಮಾಡಲಿ.
ನೀಲಪ್ಪ, ಬಾಲೆಹೊಸೂರ ಗ್ರಾಮದ ರೈತ