ವಿಜಯಸಾಕ್ಷಿ ಸುದ್ದಿ, ಮೈಸೂರು
ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಯಲ್ಲೆಲ್ಲಾ ಬಿಜೆಪಿ ಸೋತಿದೆ. ಪಂಜಾಬ್, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಬಿಜೆಪಿ ಸೋತಿಲ್ವೇನ್ರೀ? ಅವರು ಕೂಡ ಸೋಲ್ತಾರೆ. ಇದು ಕೇವಲ ರಾಜಕಾರಣಕ್ಕಾಗಿ ಹೇಳಿಕೆ ಕೊಡುತ್ತಿರುವದು. ಮುಖ್ಯಮಂತ್ರಿಗಳ `ರಾಜಕಾರಣದಲ್ಲಿ ನಾನು ಕರ್ಣನಿದ್ದಂತೆ’ ಎಂಬ ಮಾತುಗಳು ಅವರ ಭಂಡತನವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಟುವಾಗಿ ಪ್ರತ್ಯುತ್ತರ ನೀಡಿದರು.
ಅವರು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಡರ್ಟಿ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡುತ್ತ, ರಾಜ್ಯಕ್ಕೆ ರಾಹುಲ್ ಗಾಂಧಿ ಬಂದರೆ ಬಿಜೆಪಿಗೇ ಲಾಭವಿದೆ ಎನ್ನುವ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಕೇವಲ ಭಂಡರು ಮಾತ್ರ ಆ ರೀತಿ ಮಾತನಾಡುವುದು. ಟೀಕೆಗಳಿಗೂ, ನಮಗೂ ಸಂಬಂಧವಿಲ್ಲ ಎನ್ನುವ ಭಾವನೆಯಿರುವವರು ಹಾಗೆ ಮಾತನಾಡುತ್ತಾರೆ. ನಾವು ಎಂದಿಗೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಬಿಜೆಪಿ ಸರ್ಕಾರದವರು ರಾಜಕಾರಣ ಮಾಡುವ ಉದ್ದೇಶದಿಂದಲೇ ಮಾತನಾಡುತ್ತಾರೆ. ಡರ್ಟಿ ಪಾಲಿಟಿಕ್ಸ್ ಮಾಡುವುದು ಸಂಘ ಪರಿವಾರದವರು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನವರು ಹೋರಾಟ ಮಾಡಿ ಸ್ವಾತಂತ್ರ‍್ಯ ತಂದುಕೊಟ್ಟಿದ್ದಾರೆ. ಮಹಾತ್ಮ ಗಾಂಧೀಜಿಯನ್ನು ಕೊಂದವರನ್ನು ಇವರು ಆರಾಧಿಸುತ್ತಾರೆ. ಗಣೇಶನ ಮೆರವಣಿಗೆಯಲ್ಲಿ ನಾಥೂರಾಂ ಗೋಡ್ಸೆಯ ಫೋಟೊ ಇಟ್ಟುಕೊಂಡು ಓಡಾಡುತ್ತಾರೆ. ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ? ಈಗ ಇವರಿಗೆ ಡರ್ಟಿ ಪಾಲಿಟಿಕ್ಸ್ ಅಂದರೆ ಏನೆಂದೇ ಗೊತ್ತಿಲ್ಲದವರಂತೆ ಮಾತನಾಡುತ್ತಾರೆ. ನಿಮ್ಮ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಹೇಳುವುದು ಡರ್ಟಿ ಪಾಲಿಟಿಕ್ಸಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.