ವಿಜಯಸಾಕ್ಷಿ ಸುದ್ದಿ, ಗದಗ
ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲಿ ಒಬ್ಬಳೇ ಇರುವದನ್ನು ಗಮನಿಸಿ ಮಹಿಳೆಯೊಬ್ಬಳು ನಂಬಿಸಿ ತನ್ನ ಮನೆಗೆ ಕರೆದುಕೊಂಡು ಬಂದು ಅಕ್ರಮ ಬಂಧನದಲ್ಲಿಟ್ಟು, ಆಕೆಯ ಇಬ್ಬರು ಮಕ್ಕಳು ನಿರಂತರವಾಗಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.
ಘಟನೆಯ ವಿವರ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನರಗುಂದ ಪಟ್ಟಣದ ಆರ್ಭಾನ ಓಣಿಯ ಜೈತುನಬಿ ಕೋಂ ಇಮಾಮ್ ಸಾಬ್ ತೆಗ್ಗಿನಮನಿ, ಮೋದಿನಸಾಬ ಇಮಾಮಸಾಬ ತೆಗ್ಗಿನಮನಿ ಹಾಗೂ ಮಕ್ತುಂಸಾಬ ಇಮಾಮ್ ಸಾಬ್ ತೆಗ್ಗಿನಮನಿ ಈ ಮೂವರೂ ಒಂದೇ ಕುಟುಂಬದವರಾಗಿದ್ದಾರೆ.
ನೊಂದ ಬಾಲಕಿಯ ತಂದೆ ಹಾಗೂ ಮಲತಾಯಿ ಇಬ್ಬರೂ ಮಂಗಳೂರಿನಲ್ಲಿ ದುಡಿಯುತ್ತಿದ್ದರು. ನೊಂದ ಬಾಲಕಿಯನ್ನು ಧಾರವಾಡದ ಒಂದು ಮನೆಯಲ್ಲಿ ಕೆಲಸಕ್ಕೆ ಇಟ್ಟಿದ್ದರು. ಅಲ್ಲಿ ಉಳಿದುಕೊಳ್ಳಲು ಸಾಧ್ಯವಾಗದೇ ಇದ್ದಾಗ ಮರಳಿ ತನ್ನ ಮನೆಗೇ ಬಂದು ಒಬ್ಬಳೇ ವಾಸವಾಗಿದ್ದಳು.
ಈ ಸಂದರ್ಭದಲ್ಲಿ ಆರೋಪಿಗಳ ತಾಯಿ `ನೀನು ನನ್ನ ಸಂಬಂಧಿಕಳು’ ಎಂದು ಸುಳ್ಳು ಹೇಳಿ ನಂಬಿಸಿ, ನರಗುಂದದ ತನ್ನ ಮನೆಗೆ ಕರೆದುಕೊಂಡು ಬಂದು ಅಕ್ರಮ ಬಂಧನದಲ್ಲಿಟ್ಟು ನಿರಂತರವಾಗಿ ಸದರಿ ತನ್ನ ಇಬ್ಬರು ಮಕ್ಕಳೂ ದಿನನಿತ್ಯ ಅತ್ಯಾಚಾರ ಮಾಡಿ, ಗರ್ಭವತಿಯನ್ನಾಗಿಸಿದ ಆರೋಪದ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಕಲಂ 376, 448,109 ಐಪಿಸಿ ಮತ್ತು 4&6, 17 ಪೋಕ್ಸೋ ಕಾಯ್ದೆ 2012ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಸಿಪಿಐ ರಮಾಕಾಂತ. ಎಚ್.ವೈ. ತನಿಖೆ ನಡೆಸಿ 20.8.2016ರಂದು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಿ 1ನೇ ಆರೋಪಿಯಾದ ಜೈತುನಬಿ ಕೋಂ ಇಮಾಮ್ ಸಾಬ ತೆಗ್ಗಿನಮನಿ ಇವಳ ಮೇಲೆ ಆರೋಪ ಸಾಬೀತಾಗದೇ ಇರುವದರಿಂದ ಇವಳನ್ನು ಬಿಡುಗಡೆಗೊಳಿಸಿಲಾಗಿದೆ.
ಮಕ್ಕಳಾದ ಮೋದಿನಸಾಬ ಇಮಾಮಸಾಬ ತೆಗ್ಗಿನಮನಿ ಹಾಗೂ ಮಕ್ತುಂಸಾಬ ಇಮಾಮ್ ಸಾಬ ತೆಗ್ಗಿನಮನಿ ಈ ಆರೋಪಿಗಳು ಮಾಡಿದ ಅಪರಾಧವು ಕಲಂ 376(ಡಿ) ಐಪಿಸಿ 4&6 ಪೋಕ್ಸೋ ಕಾಯ್ದೆ 2012ರ ಪ್ರಕಾರ ರುಜುವಾತಾಗಿರುವದರಿಂದ ಸದರಿ ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ.ಗಳನ್ನು ದಂಡವಾಗಿ ನೊಂದ ಬಾಲಕಿಗೆ ಪರಿಹಾರ ನೀಡಲು ಆದೇಶಿಸಿದೆ.
ಅಲ್ಲದೆ, ನೊಂದ ಬಾಲಕಿಗೆ ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ, ಪುನರ್ವಸತಿಗಾಗಿ 5 ಲಕ್ಷ ರೂ.ಗಳನ್ನು ಪರಿಹಾರವಾಗಿ National Legal Services Authority ನೀಡಲು ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.