ವಿಜಯಸಾಕ್ಷಿ ಸುದ್ದಿ, ಡಂಬಳ : ಗ್ರಾಮದ ಪ್ರಮುಖ ಬೀದಿಗಳೂ ಸೇರಿದಂತೆ ಬಡಾವಣೆಗಳಲ್ಲಿ ಇರುವ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದು ಸೊಳ್ಳೆ, ಕ್ರಿಮಿಕೀಟಗಳ ಹಾವಳಿಗೆ ಕಾರಣವಾಗಿದೆ. ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಡೆಂಘೀ ಜ್ವರ, ಮಲೇರಿಯಾ ಸೇರಿದಂತೆ ವಿವಿಧ ರೋಗಗಳ ಭೀತಿ ಕಾಡುತ್ತಿದೆ. ಸಂಬಂಧಿಸಿದವರು ಕೂಡಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಡಂಬಳ ಗ್ರಾಮದ ಯುವಕರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಶಿದರ ಹೊಂಬಳ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಕಳ್ಳತನ ತಡೆಯಲು ಮುಂದಾಗಬೇಕು ಎಂದು ಗ್ರಾಮದ ಯುವಕರಾದ ಶಿವಾನಂದ ಬಂಡಿ, ಪ್ರಕಾಶ ಕೋತಂಬ್ರಿ, ಈರಣ್ಣ ಹಿರೇಮಠ, ಕುಮಾರ ಹಿರೇಮಠ, ವೀರಯ್ಯ, ವಿನಾಯಕ ಕಟ್ಟೆಣ್ಣೆನವರ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಪಿಡಿಒ ಶಶಿದರ ಹೊಂಬಳ ಮಾತನಾಡಿ, ರೋಗ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಮಿಲಾಥಿನ್ ಪೌಡರ್ ಸಿಂಪಡಿಸಲಾಗಿದ್ದು, ಗ್ರಾಮದಲ್ಲಿ ಯಾವುದೇ ಡೆಂಘೀ ಪ್ರಕರಣ ಕಂಡುಬಂದಿಲ್ಲ. ಕಳ್ಳತನ ತಡೆಗೆ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲು ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.